
ಬೆಂಗಳೂರು, 11 ಆಗಸ್ಟ್ (ಹಿ.ಸ.):
ಆ್ಯಂಕರ್:ಕಲಬುರಗಿ ಜಿಲ್ಲೆಯಲ್ಲಿ ಮುಚ್ಚಿರುವ ‘ಕೂಸಿನ ಮನೆ’ಗಳನ್ನು ತಕ್ಷಣ ಪುನರಾರಂಭಿಸುವಂತೆ ಆಗ್ರಹಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲಬುರಗಿ ಜಿಲ್ಲೆಯ 127 ‘ಕೂಸಿನ ಮನೆ’ಗಳು ಬಂದ್ ಆಗಿದ್ದು, ಕೇವಲ 66 ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 538 ‘ಕೂಸಿನ ಮನೆ’ಗಳು ಬಂದ್ ಆಗಿವೆ ಎಂದು ಅವರು ಹೇಳಿದ್ದಾರೆ.
ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಮಕ್ಕಳ ಆರೈಕೆ ಸಿಬ್ಬಂದಿಗೆ ಹಲವು ತಿಂಗಳಿಂದ ಗೌರವಧನ ಪಾವತಿಯಾಗಿಲ್ಲ ಎಂದು ಆರೋಪಿಸಿರುವ ಅಶೋಕ್, ತಕ್ಷಣ ಬಾಕಿ ಅನುದಾನ ಬಿಡುಗಡೆ ಮಾಡಿ, ಸಿಬ್ಬಂದಿಯ ಗೌರವಧನ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಚ್ಚಿರುವ ಎಲ್ಲ ‘ಕೂಸಿನ ಮನೆ’ಗಳನ್ನು ಕೂಡಲೇ ಪುನರಾರಂಭಿಸಬೇಕು. ಬಡವರ ಪರ ಸರ್ಕಾರ ಎಂದು ಹೇಳಿಕೊಳ್ಳುವ ಸರ್ಕಾರಕ್ಕೆ ಬಡ ಕಾರ್ಮಿಕ ಮಹಿಳೆಯರ ಮಕ್ಕಳಿಗೆ ಆಸರೆಯಾಗಿರುವ ‘ಕೂಸಿನ ಮನೆ’ಗಳನ್ನು ತೆರೆಯುವುದು ನಿಜವಾದ ಆಡಳಿತದ ಪರೀಕ್ಷೆಯಾಗಿದೆ. ಈ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.