
ಬಾಗಲಕೋಟೆ, 10 ಆಗಸ್ಟ್ (ಹಿ.ಸ.)
ಆ್ಯಂಕರ್ : ಲಾರಿ ಚಾಲನೆ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತ ಸಂಭವಿಸಿದ ಪರಿಣಾಮ ಚಾಲಕನೋರ್ವ ಸ್ಟೇರಿಂಗ್ ಮೇಲೆಯೇ ಕೊನೆಯುಸಿರೆಳೆದಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಸೋಲಾಪುರ–ಮಂಗಳೂರು ರಾಷ್ಟ್ರೀಯ ಹೆದ್ದಾರಿ-50ರ ಕೆಎಚ್ಡಿಸಿ ಕಾಲೋನಿ ಸಮೀಪ ಸೋಮವಾರ ನಡೆದಿದೆ.
ಮೃತ ಚಾಲಕನನ್ನು ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಳಿ ಪಟ್ಟಣದ ಇನ್ಸಾರ್ ಅಹಮದ್ (60) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಇನ್ಸಾರ್ ಅಹಮದ್ ಅವರು ಲಾರಿಯಲ್ಲಿ ಸರಕು ಸಾಗಿಸಿಕೊಂಡು ಕುಷ್ಟಗಿ ಮಾರ್ಗದತ್ತ ತೆರಳುತ್ತಿದ್ದರು. ಕೆಎಚ್ಡಿಸಿ ಕಾಲೋನಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಪರಿಸ್ಥಿತಿಯನ್ನು ಅರಿತುಕೊಂಡ ಚಾಲಕ ತಕ್ಷಣವೇ ಲಾರಿಯ ವೇಗವನ್ನು ನಿಯಂತ್ರಿಸಿ, ಯಾವುದೇ ಅಪಘಾತ ಸಂಭವಿಸದಂತೆ ಎಚ್ಚರಿಕೆಯಿಂದ ಹೆದ್ದಾರಿಯ ಬದಿಗೆ ಲಾರಿಯನ್ನು ನಿಲ್ಲಿಸಿದ್ದಾರೆ.
ಆದರೆ, ಲಾರಿಯನ್ನು ಸುರಕ್ಷಿತವಾಗಿ ರಸ್ತೆ ಬದಿಗೆ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಸ್ಟೇರಿಂಗ್ ಮೇಲೆಯೇ ಕುಸಿದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಲಾರಿ ರಸ್ತೆ ಬದಿಗೆ ನಿಂತಿದ್ದರಿಂದ ಸಂಭವಿಸಬಹುದಾದ ಭಾರೀ ಅಪಘಾತವೊಂದು ತಪ್ಪಿದಂತಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಹಾಗೂ ಮೃತ ಚಾಲಕನ ಕುರಿತು ಮಾಹಿತಿ ಕಲೆಹಾಕಿದ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / jyothi deshpande