ಮೂವತ್ತು ದಿನದಲ್ಲೇ ಮೂರನೇ ಮುದ್ರಣ ಕಂಡ ಕಾಲಡಿಯ ಕಣ್ಣು ಕೃತಿ
ಮೂವತ್ತು ದಿನದಲ್ಲೇ ಮೂರನೇ ಮುದ್ರಣ ಕಂಡ ಕಾಲಡಿಯ ಕಣ್ಣು ಕೃತಿ
ಲೇಖಕ ಸಿ.ಎಂ.ಮುನಿಯಪ್ಪ


ಕೋಲಾರ, 10 ಆಗಷ್ಟ್ (ಹಿ.ಸ.) :

ಆ್ಯಂಕರ್ : ದಲಿತ ಚಳವಳಿಯ ಮಂಚೂಣಿ ನಾಯಕ ಸಿ.ಎಂ.ಮುನಿಯಪ್ಪರ ಆತ್ಮಕಥನ ಕಾಲಡಿಯ ಕಣ್ಣು ಬಿಡುಗಡೆಗೊಂಡ ಮೂವತ್ತು ದಿನಗಳೊಳಗೆ ಮೂರನೇ ಮುದ್ರಣ ಕಂಡು ಓದುಗರ ಅಪಾರ ಮನ್ನಣೆ ಪಡೆದು ಕನ್ನಡ ಸಾಹಿತ್ಯ ಲೋಕದ ಗಮನಸೆಳೆದಿದೆ.

ಸಿ.ಎಂ.ಮುನಿಯಪ್ಪರ ನಾಲ್ಕು ದಶಕಗಳ ಚಳವಳಿಯ ಬದುಕು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಚಾರಿತ್ರಿಕ ಹೋರಾಟದ ಹಾದಿಯನ್ನು ದಾಖಲಿಸುತ್ತಲೇ, ಕಗ್ಗತ್ತಲಲ್ಲಿದ್ದ ದಮನಿತ ಲೋಕದ ಒಡಲಾಳದ ಧ್ವನಿಯಾಗಿ ಕಾಲಡಿಯ ಕಣ್ಣು ಕೃತಿಯು ದಲಿತ ಲೋಕದ ಕಥನವಾಗಿ ಮೂಡಿ ಬಂದಿದೆ. ೨೦೨೬ ಜುಲೈ ೧೦ ರಂದು ಮುಂಗೋಳಿ ಪ್ರಕಾಶನದ ಮೂಲಕ ಈ ಕೃತಿಯು ಸಾವಿರ ಪ್ರತಿಗಳೊಂದಿಗೆ ಪ್ರಕಟಗೊಂಡಿದ್ದು, ಹದಿನೈದು ದಿನಗಳಲ್ಲೇ ಓದುಗರ ಕೈಸೇರಿತು. ಎರಡನೇ ಮುದ್ರಣವು ಮತ್ತೇ ಸಾವಿರ ಪ್ರತಿಗಳೊಂದಿಗೆ ಜುಲೈ ೨೭ ರಂದು ಮುದ್ರಣ ಕಂಡಿತ್ತು. ಇಂದು ಆಗಸ್ಟ್ ೧೦ ಮೂರನೇ ಮುದ್ರಣವು ಸಾವಿರ ಪ್ರತಿಗಳೊಂದಿಗೆ ಓದುಗರ ಕೈಸೇರಲು ಸಜ್ಜಾಗಿದೆ.

ಸಾವಿರಾರು ವರ್ಷಗಳಿಂದ ಅಕ್ಷರ ಸಂಸ್ಕೃತಿಯಿಂದಲೇ ವಂಚಿತವಾಗಿದ್ದ ಸಮುದಾಯದ ಕಥನವನ್ನು ಇಡೀ ಕನ್ನಡ ನಾಡು ಪ್ರೀತಿಯಿಂದ ಸ್ಪೀಕರಿಸಿದೆ, ಇದು ಐವತ್ತು ವರ್ಷಗಳ ದಲಿತ ಚಳವಳಿಯ ಸ್ವಾಭಿಮಾನ, ಸಮಾನತೆಯ ಹೋರಾಟದ ಹಾದಿಗೆ ಅಭೂತ ಪೂರ್ವ ಮನ್ನಣೆ ಎನ್ನಲಾಗಿದೆ.

ಕರ್ನಾಟಕ ದಲಿತ ಚಳವಳಿಯ ಐದು ದಶಕಗಳ ಚರಿತ್ರೆಯನ್ನು ಪ್ರಜ್ಞಾವಂತ ಹೊಸ ತಲೆಮಾರು ಕುತೂಹಲದಿಂದ ಓದುತ್ತಿರುವುದು ತಮಗೆ ಸಂತೋಷ ತಂದಿದೆ, ಈ ಮೂರು ಮುದ್ರಣ ಕಾರ್ಯಕ್ಕೆ ಒತ್ತಾಸೆಯಾದ ಪ್ರತಿಯೊಬ್ಬರಿಗೂ ಕೃತಿಕಾರ ಸಿ.ಎಂ.ಮುನಿಯಪ್ಪ ಧನ್ಯವಾದಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande