

ಕೊಪ್ಪಳ, 10 ಆಗಸ್ಟ್ (ಹಿ.ಸ.)
ಆ್ಯಂಕರ್ : ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮದ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ಪರಿಷ್ಕರಿಸಿ ಮರು ನಿಗದಿಪಡಿಸಿದ್ದು, ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಲು ಆಗಸ್ಟ್ 17ರವರೆಗೆ ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಕುರಿತು ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮರುನಿಗದಿತ ಪರಿಷ್ಕರಣೆ ವೇಳಾಪಟ್ಟಿಯಂತೆ ಬಿಎಲ್ಒ.ಗಳಿಂದ ಮನೆ ಮನೆ ಭೇಟಿ ಮತ್ತು ಮತಗಟ್ಟೆಗಳ ರ್ಯಾಷನಲೈಜೆಷನ್ ಆಗಸ್ಟ್ 17ರವರೆಗೆ ನಡೆಯಲಿದ್ದು, ಆ. 24ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ. ಆ. 24 ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಆ. 24 ರಿಂದ ಅಕ್ಟೋಬರ್ 22ರವರೆಗೆ ನೋಟಿಸ್ ಅವಧಿ ಮತ್ತು ಹಕ್ಕು-ಆಕ್ಷೇಪಣೆಗಳ ವಿಲೇವಾರಿ ನಡೆಯಲಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ. ಜಿಲ್ಲೆಯ ನಾಗರಿಕರು ಹಾಗೂ ಮತದಾರರು ಈ ನಿಗದಿತ ಅವಧಿಯಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದರು.
*ಎಸ್ಐಆರ್ ಪ್ರಕ್ರಿಯೆಗೆ ಉತ್ತಮ ಸಹಕಾರ:* ಕೊಪ್ಪಳ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಯು ಸುಗಮವಾಗಿ ಮತ್ತು ಶಾಂತಿಯುತವಾಗಿ ಸಾಗುತ್ತಿದ್ದು, ಒಟ್ಟು ಹಂಚಿಕೆ ಮಾಡಲಾದ 11,90,214 ಗಣತಿ ನಮೂನೆಗಳಲ್ಲಿ ಇಲ್ಲಿಯವರೆಗೆ 10,41,046 ನಮೂನೆಗಳನ್ನು ಯಶಸ್ವಿಯಾಗಿ ಡಿಜಿಟಲೀಕರಣ ಮಾಡಲಾಗಿದೆ. ಈ ಪ್ರಕ್ರಿಯೆಗೆ ಜಿಲ್ಲೆಯ ಮತದಾರರು, ರಾಜಕೀಯ ಪಕ್ಷಗಳು, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ಹೇಳಿದರು.
ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಗದ ಮತದಾರರನ್ನು ಅಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್, ಅದರ್ ಎಂದು ಗುರುತಿಸಲಾಗಿದ್ದು, ಇದರಲ್ಲಿ ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 1,49,168 ಮತದಾರರ (ಎ.ಎಸ್.ಡಿ.ಡಿ.ಒ) ಪಟ್ಟಿಯನ್ನು ಜಿಲ್ಲಾ ವೆನ್ಸೈಟ್ನಲ್ಲಿ https://koppal.nic.in/en/election/ ಪ್ರಚುರಪಡಿಸಲಾಗಿರುತ್ತದೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಮತದಾರರ ವಿವರವನ್ನು ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ನೀಡಲಾಗುತ್ತಿದೆ ಎಂದರು.
ದಿನಾಂಕ:26.07.2026 ರಿಂದ ಇಲ್ಲಿಯವರೆಗೆ ಎ.ಎಸ್.ಡಿ.ಡಿ.ಒ ಎಂದು ಗುರುತು ಮಾಡಲಾದ ಮತದಾರರುಗಳ ಪೈಕಿ ಒಟ್ಟು 10,958 ಮತದಾರರ ಗಣತಿ ನಮೂನೆಗಳನ್ನು ಮತದಾರರ ನೋಂದಣಾಧಿಕಾರಿಗಳು ರೋಲ್ ಬ್ಯಾಕ್ ಮಾಡಿದ್ದು, ಈ ಕಾರ್ಯವು ಆಗಸ್ಟ್ 17 ರವರೆಗೆ ನಡೆಯಲಿದೆ. ಅರ್ಹ ಮತದಾರರ ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲೆಯ ಎಲ್ಲಾ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಎ.ಎಸ್.ಡಿ.ಡಿ.ಒ ಪಟ್ಟಿಯನ್ನು ನೀಡಲಾಗಿದ್ದು, ಅವರು ಸಹ ತಮ್ಮ ಬೂತ್ ಮಟ್ಟದ ಏಜೆಂಟರುಗಳ ಸಹಾಯದಿಂದ ಪರಿಶೀಲಿಸಿ ಆಕ್ಷೇಪಣೆಯನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು ಎಂದು ತಿಳಿಸಿದೆ.
ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ, ದಿನಾಂಕ:10.08.2026 ರವರೆಗೆ ಒಟ್ಟು 1,315 ಬೂತ್ ಮಟ್ಟದ ಅಧಿಕಾರಿಗಳ ಹಾಗೂ ಬೂತ್ ಮಟ್ಟದ ಏಜೆಂಟರುಗಳ ಸಭಾ ನಡವಳಿಗಳನ್ನು ಬಿಎಲ್ಓ ಆ್ಯಪ್ ನಲ್ಲಿ ಅಪ್ಡೇಟ್ ಮಾಡಲಾಗಿರುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಏಜೆಂಟರಗಳು ಸಭೆಯನ್ನು ಪುನಃ ಪುನಃ ಮಾಡುವುದರಿಂದ ಆ ಭಾಗದಲ್ಲಿ ಬರುವ ಎ.ಎಸ್.ಡಿ.ಡಿ.ಒ ಮತದಾರರುಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದಾಗಿದೆ ಮತ್ತು ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಮುಂದುವರಿಸಲು ಸಹಕಾರಿಯಾಗುತ್ತದೆ. ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ 1315 ಮತಗಟ್ಟೆಗಳ ಪೈಕಿ 1200 ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳಿಗೆ ಪ್ರತ್ಯೇಕ ಹೆಚ್ಚುವರಿಯಾಗಿ 37 ಮತಗಟ್ಟೆಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಅಬ್ಸೆಂಟ್ ಅಥವಾ ಶಿಫ್ಟೆಡ್ ಪಟ್ಟಿಯಲ್ಲಿ ಹೆಸರು ಬಂದಿರುವವರು, ತಮ್ಮ ತಾಲ್ಲೂಕಿನ ತಹಶಿಲ್ದಾರರು, ಮತದಾರರ ನೋಂದಣಾಧಿಕಾರಿ ಅಥವಾ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ನಮೂನೆ ಭರ್ತಿ ಮಾಡಿ ನೀಡಲು ಅವಕಾಶವಿದೆ. ಅಲ್ಲದೇ ಅಕ್ಟೋಬರ್ ವೇಳೆಗೆ 18 ವರ್ಷ ತುಂಬುವ ಯುವಕ-ಯುವತಿಯರು ಹಾಗೂ ಮತದಾರರ ಪಟ್ಟಿಯಿಂದ ಹೊರಗುಳಿದವರು 'ನಮೂನೆ 6' ಸಲ್ಲಿಸಿ ಹೆಸರು ಸೇರಿಸಲು ವಿಶೇಷ ನೋಂದಣಿ ಅಭಿಯಾನ ಮತ್ತು ಕ್ಯಾಂಪ್ಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಚುನಾವಣಾ ತಹಶಿಲ್ದಾರರ ರವಿ ವಸ್ತ್ರದ್ ಸೇರಿದಂತೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು, ಜಿಲ್ಲಾ ಚುನಾವಣಾ ಶಾಖೆಯ ಶಿರಸ್ತೆದಾರರು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್