ಸಿಟ್ಟು ಬಿಟ್ಟರೆ ಸಿಎಂ ಆಗ್ತಿಯಾ; ಸಚಿವ ವಿಜಯಾನಂದ ಕಾಶಪ್ಪನವರಿಗೆ ಸಿದ್ದನಕೊಳ್ಳ ಶ್ರೀಗಳ ಆಶೀರ್ವಾದ
ಬಾಗಲಕೋಟೆ, 10 ಆಗಸ್ಟ್ (ಹಿ.ಸ.) ಆ್ಯಂಕರ್ : “ಸಿಟ್ಟು, ಕೋಪ ಬಿಟ್ಟರೆ ಮುಖ್ಯಮಂತ್ರಿ ಆಗ್ತಿಯಾ ಎಂದು ಸಚಿವ ವಿಜಯಾನಂದ ಕಾಶಪ್ಪನವರಿಗೆ ಸಿದ್ದನಕೊಳ್ಳದ ಡಾ. ಶಿವಕುಮಾರ ಶ್ರೀಗಳು ನೀಡಿದ ಈ ‘ಷರತ್ತುಬದ್ಧ’ ಆಶೀರ್ವಾದ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸ
Cm


ಬಾಗಲಕೋಟೆ, 10 ಆಗಸ್ಟ್ (ಹಿ.ಸ.)

ಆ್ಯಂಕರ್ : “ಸಿಟ್ಟು, ಕೋಪ ಬಿಟ್ಟರೆ ಮುಖ್ಯಮಂತ್ರಿ ಆಗ್ತಿಯಾ ಎಂದು ಸಚಿವ ವಿಜಯಾನಂದ ಕಾಶಪ್ಪನವರಿಗೆ ಸಿದ್ದನಕೊಳ್ಳದ ಡಾ. ಶಿವಕುಮಾರ ಶ್ರೀಗಳು ನೀಡಿದ ಈ ‘ಷರತ್ತುಬದ್ಧ’ ಆಶೀರ್ವಾದ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಚಿವ ವಿಜಯಾನಂದ ಕಾಶಪ್ಪನವರು ಹುನಗುಂದ ಸಮೀಪದ ಸಿದ್ದನಕೊಳ್ಳಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಚಿವರನ್ನು ಆಶೀರ್ವದಿಸಿದ ಶ್ರೀಗಳು, “ನಿಮ್ಮ ಸಿಟ್ಟು, ಕೋಪವನ್ನು ಬಿಟ್ಟರೆ ಮುಖ್ಯಮಂತ್ರಿ ಆಗುವ ಅವಕಾಶವಿದೆ” ಎಂಬರ್ಥದಲ್ಲಿ ಆಶೀರ್ವದಿಸಿರುವುದು ವಿಶೇಷ ಗಮನ ಸೆಳೆದಿದೆ.

ಸಿದ್ದನಕೊಳ್ಳ ಮಠವು ನಾಡಿನ ಕಲಾವಿದರು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಪಾಲಿಗೆ ವಿಶೇಷ ಪ್ರೀತಿ ಮತ್ತು ಗೌರವದ ತಾಣವಾಗಿದೆ. ಡಾ. ಶಿವಕುಮಾರ ಶ್ರೀಗಳು ರಾಜಕೀಯ ನಾಯಕರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದು, ತಮ್ಮದೇ ಆದ ರೀತಿಯಲ್ಲಿ ಭವಿಷ್ಯದ ಬಗ್ಗೆ ಶುಭ ಹಾರೈಸುತ್ತಾ ಬಂದಿದ್ದಾರೆ.

ಸೋಮಣ್ಣ ಅವರಿಗೆ ನೀಡಿದ್ದ ಆಶೀರ್ವಾದವೂ ಚರ್ಚೆಯಲ್ಲಿ:

ಸಿದ್ದನಕೊಳ್ಳ ಶ್ರೀಗಳ ಈ ಆಶೀರ್ವಾದದ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಹಿಂದಿನ ಪ್ರಸಂಗವೂ ಇದೀಗ ನೆನಪಾಗುತ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ವಿ. ಸೋಮಣ್ಣ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಸಂದರ್ಭದಲ್ಲಿ ಸಿದ್ದನಕೊಳ್ಳಕ್ಕೆ ಆಗಮಿಸಿದ್ದರು. ಆಗ ಡಾ. ಶಿವಕುಮಾರ ಶ್ರೀಗಳು ಅವರಿಗೆ ಮುಂದಿನ ದಿನಗಳಲ್ಲಿ ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯಾಗುವಂತೆ ಆಶೀರ್ವದಿಸಿದ್ದರು ಎನ್ನಲಾಗಿದೆ.

ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ವಿ. ಸೋಮಣ್ಣ ಅವರು ಗೆಲುವು ಸಾಧಿಸಿ ಕೇಂದ್ರ ಸಚಿವರಾಗಿದ್ದಾರೆ. ಆ ಬಳಿಕ ಸಿದ್ದನಕೊಳ್ಳಕ್ಕೆ ಮತ್ತೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದರು ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಈ ಹಿಂದಿನ ಘಟನೆಯ ಹಿನ್ನೆಲೆಯಲ್ಲಿ ಇದೀಗ ಸಚಿವ ವಿಜಯಾನಂದ ಕಾಶಪ್ಪನವರಿಗೆ ನೀಡಿರುವ ಆಶೀರ್ವಾದವೂ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

‘ಸಿಟ್ಟು’ ವಿಚಾರವೇ ಈಗ ಪ್ರಮುಖ ಚರ್ಚೆಯ ವಿಷಯ

ಸಚಿವ ವಿಜಯಾನಂದ ಕಾಶಪ್ಪನವರ ಅವರ ಸ್ವಭಾವದಲ್ಲಿ ಸಿಟ್ಟು ಮತ್ತು ನೇರ ನಿಷ್ಠುರ ನಡೆ ಪ್ರಮುಖವಾಗಿ ಚರ್ಚೆಯಾಗುತ್ತಲೇ ಬಂದಿದೆ. ಇದೇ ಹಿನ್ನೆಲೆಯಲ್ಲಿ ಸಿದ್ದನಕೊಳ್ಳ ಶ್ರೀಗಳು “ಸಿಟ್ಟು ಬಿಟ್ಟರೆ ಸಿಎಂ ಆಗ್ತಿಯಾ” ಎಂದು ಹೇಳಿರುವುದು ರಾಜಕೀಯ ಚರ್ಚೆಗೆ ಹೊಸ ಆಯಾಮ ನೀಡಿದೆ.

ವಿಶೇಷವೆಂದರೆ, ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತಮ್ಮ ಆಪ್ತರೊಂದಿಗೆ ಮಾತನಾಡಿದ್ದ ಕಾಶಪ್ಪನವರು, ಇನ್ನು ಮುಂದೆ ಸಿಟ್ಟು ಮತ್ತು ಕೋಪವನ್ನು ನಿಯಂತ್ರಿಸಿಕೊಂಡು ನಡೆಯುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಸಿದ್ದನಕೊಳ್ಳ ಶ್ರೀಗಳಿಂದಲೂ ಇದೇ ವಿಚಾರವನ್ನು ಪ್ರಸ್ತಾಪಿಸಿ ಆಶೀರ್ವಾದ ದೊರೆತಿರುವುದು ಒಂದಕ್ಕೊಂದು ಕಾಕತಾಳೀಯ ಎಂಬಂತೆ ಕಂಡುಬಂದಿದೆ.

ಸ್ವಭಾವ ಬದಲಾವಣೆ ಸುಲಭದ ಮಾತಲ್ಲ

ಆದರೆ, ಸಿಟ್ಟು ಮತ್ತು ಕೋಪವನ್ನು ಸಂಪೂರ್ಣವಾಗಿ ತ್ಯಜಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ವ್ಯಕ್ತಿಯ ಸ್ವಭಾವವು ವರ್ಷಗಳ ಕಾಲ ಬೆಳೆದಿರುವುದರಿಂದ ಅದು ಒಂದೇ ದಿನದಲ್ಲಿ ಬದಲಾಗುವುದಿಲ್ಲ. ಅದಕ್ಕಾಗಿ ನಿರಂತರ ಆತ್ಮನಿಯಂತ್ರಣ, ಅಭ್ಯಾಸ ಮತ್ತು ಮನಸ್ಸಿನ ಮೇಲೆ ಹಿಡಿತ ಅಗತ್ಯವಾಗುತ್ತದೆ.

ವಿಜಯಾನಂದ ಕಾಶಪ್ಪನವರು ತಮ್ಮ ನೇರ, ನಿಷ್ಠುರ ಹಾಗೂ ಕೆಲವೊಮ್ಮೆ ಒರಟಾಗಿ ಕಾಣಿಸಿಕೊಳ್ಳುವ ರಾಜಕೀಯ ನಡೆಗೆ ಹೆಸರುವಾಸಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಸಿದ್ದನಕೊಳ್ಳ ಶ್ರೀಗಳ “ಸಿಟ್ಟು ಬಿಟ್ಟರೆ ಸಿಎಂ” ಎಂಬ ಮಾತು ಈಗ ಅವರ ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿದ ಕುತೂಹಲಕಾರಿ ಹೇಳಿಕೆಯಾಗಿ ಪರಿಣಮಿಸಿದೆ.

ಇತ್ತೀಚಿನ ದಿನಗಳಲ್ಲಿಯೂ ವಿವಿಧ ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಕಾಶಪ್ಪನವರ ನೀಡಿರುವ ಹೇಳಿಕೆಗಳು ಚರ್ಚೆಗೆ ಕಾರಣವಾಗಿವೆ. ಹೀಗಾಗಿ ಸಿಟ್ಟು ನಿಯಂತ್ರಿಸುವುದಾಗಿ ಅವರು ನೀಡಿರುವ ಭರವಸೆಯನ್ನು ಅವರು ಮುಂದಿನ ದಿನಗಳಲ್ಲಿ ಹೇಗೆ ಕಾರ್ಯರೂಪಕ್ಕೆ ತರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

“ಮನಸ್ಸಿನಂತೆ ಮಹಾದೇವ” — ಪ್ರಯತ್ನದ ಜೊತೆಗೆ ಪ್ರಾರ್ಥನೆಯೂ ಅಗತ್ಯ

“ಮನಸ್ಸಿನಂತೆ ಮಹಾದೇವ” ಎಂಬ ಮಾತಿನಂತೆ, ವ್ಯಕ್ತಿಯೊಬ್ಬರು ತಮ್ಮಲ್ಲಿನ ಬದಲಾವಣೆಯನ್ನು ನಿಜವಾಗಿಯೂ ಬಯಸಿದರೆ ಅದನ್ನು ಸಾಧಿಸಲು ಸಾಧ್ಯ ಎನ್ನುವ ನಂಬಿಕೆ ಇದೆ. ಸಿಟ್ಟನ್ನು ನಿಯಂತ್ರಿಸುವ ವಿಚಾರದಲ್ಲಿಯೂ ಇದೇ ಅನ್ವಯವಾಗುತ್ತದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹಲವು ಸಂದರ್ಭಗಳಲ್ಲಿ “ಪ್ರಯತ್ನ ಫಲಿಸದಿದ್ದರೂ ಪ್ರಾರ್ಥನೆ ಫಲಿಸುತ್ತದೆ” ಎಂಬ ನಂಬಿಕೆಯ ಮಾತುಗಳನ್ನು ಹೇಳಿರುವುದು ಕಂಡುಬರುತ್ತದೆ. ಇದೀಗ ಕಾಶಪ್ಪನವರ ಅವರ ರಾಜಕೀಯ ಬದುಕಿನ ಮುಂದಿನ ಹಂತದಲ್ಲಿ ಪ್ರಯತ್ನದ ಜೊತೆಗೆ ಆಧ್ಯಾತ್ಮಿಕ ನಂಬಿಕೆಯೂ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದು ಗಮನಾರ್ಹ.

ಸಿದ್ದನಕೊಳ್ಳ ಶ್ರೀಗಳು ಬಿತ್ತಿರುವ “ಸಿಟ್ಟು ಬಿಟ್ಟರೆ ಸಿಎಂ” ಎಂಬ ಭವಿಷ್ಯದ ಮಾತು ಕೇವಲ ಆಶೀರ್ವಾದವಾಗಿಯೇ ಉಳಿಯುತ್ತದೆಯೋ ಅಥವಾ ಮುಂದೊಂದು ದಿನ ರಾಜಕೀಯ ವಾಸ್ತವದ ರೂಪ ಪಡೆಯುತ್ತದೆಯೋ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

ಒಟ್ಟಿನಲ್ಲಿ, ಸಚಿವ ವಿಜಯಾನಂದ ಕಾಶಪ್ಪನವರ ಅವರ ಮುಂದಿನ ರಾಜಕೀಯ ನಡೆ, ಅವರ ಸ್ವಭಾವದಲ್ಲಾಗುವ ಬದಲಾವಣೆ ಮತ್ತು ಪಕ್ಷದೊಳಗಿನ ಅವರ ರಾಜಕೀಯ ಬೆಳವಣಿಗೆಗಳು ಎಲ್ಲವೂ ಇದೀಗ ಕುತೂಹಲದ ಕೇಂದ್ರವಾಗಿವೆ.

ಸಿದ್ದನಕೊಳ್ಳ ಶ್ರೀಗಳ “ಷರತ್ತುಬದ್ಧ ಆಶೀರ್ವಾದ”ದ ಬೆನ್ನಲ್ಲೇ ಕಾಶಪ್ಪನವರ ಅವರು ಸಿಟ್ಟು-ಕೋಪವನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಿಕೊಂಡು ರಾಜಕೀಯ ಪಯಣ ಮುಂದುವರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande