


ಬಳ್ಳಾರಿ, 10 ಆಗಸ್ಟ್ (ಹಿ.ಸ.)
ಆ್ಯಂಕರ್ : ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸರಿಯಾಗಿ ಆಗಲು ಮತ್ತು ಅವರ ಸರ್ವತೋಮುಖ ವಿಕಾಸಕ್ಕೆ ಪೂರಕವಾಗಿ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ಜಂತುಹುಳು ನಿವಾರಕ (ಆಲ್ಬೆಂಡಜೋಲ್) ಮಾತ್ರೆಗಳನ್ನು ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಡಿ. ಮಳಗಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್. ವಿಭಾಗ, ಗಾಂಧಿನಗರದ ನಗರ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕಪ್ಪಗಲ್ಲು ರಸ್ತೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ರಾಷ್ಟಿಯ ಜಂತುಹುಳು ನಿವಾರಣಾ ಕಾರ್ಯಕ್ರಮ”ದಡಿ ಸಮುದಾಯ ಆಧಾರಿತ ಜಂತುಹುಳು ನಿವಾರಣೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದಂತೆ ರೋಗನಿರೋಧಕ ಶಕ್ತಿಯೂ ಕುಂದುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳೂ ದೀರ್ಘಾವಧಿಯವರೆಗೆ ಕಾಡಬಹುದು. ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಮುಂದುವರಿದರೆ ಹದಿಹರೆಯದ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುತ್ತವೆ. ರಕ್ತಹೀನತೆಯನ್ನು ಆರಂಭದಲ್ಲಿಯೇ ಗುರುತಿಸುವುದರಿಂದ ಮಕ್ಕಳ ದೈಹಿಕ ಬೆಳವಣಿಗೆಯ ಕುಂಠಿತವನ್ನು ತಡೆಗಟ್ಟಿ, ಅವರ ಬಾಲ್ಯವನ್ನು ಸದೃಢಗೊಳಿಸಲು ಸಾಧ್ಯ ಎಂದು ಹೇಳಿದರು.
1 ರಿಂದ 2 ವರ್ಷದೊಳಗಿನ ಮಕ್ಕಳಿಗೆ 200 ಮಿಲಿಗ್ರಾಂ ಹಾಗೂ 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 400 ಮಿಲಿಗ್ರಾಂ ಅಲ್ಬೆಂಡಾಜೋಲ್ ಮಾತ್ರೆಗಳನ್ನು ನೀಡಲಾಗುತ್ತಿದೆ. ಜಂತು ರಹಿತ ಮಕ್ಕಳು ದೇಶದ ಸಂಪತ್ತು. ಎಲ್ಲಾ ವಿದ್ಯಾರ್ಥಿಗಳು ಈ ಮಾತ್ರೆಯ ಸದುಪಯೋಗ ಪಡೆದುಕೊಂಡು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಹನುಮಂತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮ, ನಗರ ಮತ್ತು ಪಟ್ಟಣಗಳ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರೆ ವಿತರಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳಲ್ಲಿ ಮಾತ್ರೆ ನೀಡಲಾಗುತ್ತಿದ್ದು, ಮಾತ್ರೆ ಪಡೆಯಲು ಬಿಟ್ಟುಹೋದ ಮಕ್ಕಳಿಗೆ ಆಗಸ್ಟ್ 17 ರಂದು ನೀಡಲಾಗುವುದು. ಮಕ್ಕಳಿಗೆ ಯಾವುದೇ ಕಾರಣಕ್ಕೂ ಮಾತ್ರೆಯನ್ನು ನುಂಗಿಸದೇ, ಚೀಪಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಂತುಹುಳು ನಿವಾರಣೆಯಿಂದ ರಕ್ತಹೀನತೆ ನಿಯಂತ್ರಣ, ಪೌಷ್ಟಿಕತೆ ಹಾಗೂ ರೋಗನಿರೋಧಕ ಶಕ್ತಿ ಸುಧಾರಣೆ, ಓದಿನಲ್ಲಿ ಏಕಾಗ್ರತೆ, ಹಾಜರಾತಿಯಲ್ಲಿ ಪ್ರಗತಿ ಮತ್ತು ದೈಹಿಕ-ಮಾನಸಿಕ ಆರೋಗ್ಯ ರಕ್ಷಣೆ ಸಾಧ್ಯವಾಗುತ್ತದೆ. ಕಾಯಿಲೆಯ ಲಕ್ಷಣಗಳು ಕಾಣಿಸದಿದ್ದರೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಈ ಸುರಕ್ಷಿತ ಮಾತ್ರೆಯನ್ನು ಸೇವಿಸುವುದು ಅಗತ್ಯ ಎಂದು ಅವರು ವಿವರಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್, ವೈದ್ಯಾಧಿಕಾರಿಗಳಾದ ಡಾ. ಸಾತ್ವಿಕ್ ಹಾಗೂ ಡಾ. ಚಂದನ, ಬಳ್ಳಾರಿ ಡಯಟ್ ಹಿರಿಯ ಉಪನ್ಯಾಸಕ ಮಯೂರ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಿ.ಹೆಚ್. ಚಿಟ್ಟಿ, ಶಾಲೆಯ ಮುಖ್ಯಗುರು ಅಕ್ಕಮಹಾದೇವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಎಸ್. ಕರ್ಜಗಿ, ರೇಣುಕಾ ಜಡಗಣ್ಣನವರ, ಡಿಎನ್ಒ ಗಿರೀಶ್, ಆರ್.ಕೆ.ಎಸ್.ಕೆ ಸಲಹೆಗಾರ ಮನೋಹರ್ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್