ಇಂದು ನಾಳೆ ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಬರ ಪರಿಸ್ಥಿತಿ ಪರಿಶೀಲನೆ
ಬೆಂಗಳೂರು, 10 ಆಗಸ್ಟ್ (ಹಿ.ಸ.): ಆ್ಯಂಕರ್: ಸಮರ್ಪಕ ಮಳೆಯಾಗದೆ ತುಮಕೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರಿಸ್ಥಿತಿ ಪರಿಶೀಲಿಸುವುದಾಗಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತ
ಮಾಧ್ಯಮಗಳಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ


ಬೆಂಗಳೂರು, 10 ಆಗಸ್ಟ್ (ಹಿ.ಸ.):

ಆ್ಯಂಕರ್:

ಸಮರ್ಪಕ ಮಳೆಯಾಗದೆ ತುಮಕೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರಿಸ್ಥಿತಿ ಪರಿಶೀಲಿಸುವುದಾಗಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ತಾವು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ವಿವಿಧ ತಾಲೂಕುಗಳ ಬರ ಪರಿಸ್ಥಿತಿ ಕುರಿತು ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ತುಮಕೂರು ಸೇರಿದಂತೆ ನಾಲ್ಕೈದು ಜಿಲ್ಲೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿದ್ದರೂ, ಸಿರಾ, ಚಿಕ್ಕನಾಯಕನಹಳ್ಳಿ ಹಾಗೂ ಪಾವಗಡದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಖುದ್ದು ಪರಿಶೀಲನೆ ನಡೆಸುವುದಾಗಿ ಹೇಳಿದರು.

ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸಮರ್ಪಕ ಮಳೆಯಾಗಿಲ್ಲ. ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳ ನೀರಿನ ಮಟ್ಟ ತುಸು ಸುಧಾರಿಸಿದೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿರುವುದರಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಆದರೆ ಒಣಭೂಮಿ ಪ್ರದೇಶಗಳ ಪರಿಸ್ಥಿತಿ ಗಂಭೀರವಾಗಿದ್ದು, ಬರ ಪರಿಸ್ಥಿತಿಯ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂದರು.

ಖಾತೆ ಹಂಚಿಕೆಯಲ್ಲಿ ಗೊಂದಲವಿಲ್ಲ

ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿ ನಿನ್ನೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದಾರೆ. ಹೊಸದಾಗಿ ಸಚಿವರಾದವರಿಗೆ ಆರಂಭದಲ್ಲಿ ಕೆಲವು ಅನುಮಾನಗಳಿರುವುದು ಸಹಜ. ಸಂಬಂಧಿಸಿದ ಅಧಿಕಾರಿಗಳು ನಂತರ ಅಗತ್ಯ ಸ್ಪಷ್ಟನೆ ನೀಡುತ್ತಾರೆ. ತಾವು ಸಚಿವರಾದಾಗಲೂ ಇದೇ ರೀತಿಯ ಪ್ರಕ್ರಿಯೆ ನಡೆದಿತ್ತು. ಹೊಸ ಸಚಿವರು ವಿಧಾನಮಂಡಲದಲ್ಲಿ ಸಮರ್ಥವಾಗಿ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದು, ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.

ನೈಸ್ ರಸ್ತೆ ವಿಚಾರ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ

ನೈಸ್ ರಸ್ತೆಯಲ್ಲಿ ಸುಂಕ ಪಾವತಿಸದಂತೆ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನೈಸ್ ಯೋಜನೆಗೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿರುವುದು ಹೊಸದಲ್ಲ. ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಉಪಸಮಿತಿ ಅಧ್ಯಕ್ಷನಾಗಿ ಈಗಾಗಲೇ ಏಳು–ಎಂಟು ಸಭೆಗಳನ್ನು ನಡೆಸಿದ್ದು, ಸಮಸ್ಯೆಗಳನ್ನು ಎ, ಬಿ ಮತ್ತು ಸಿ ವಿಭಾಗಗಳಾಗಿ ವಿಂಗಡಿಸಿ ಪರಿಶೀಲಿಸಲಾಗುತ್ತಿದೆ ಎಂದರು.

ಹಲವು ವರ್ಷಗಳ ಬಳಿಕ ಯೋಜನೆಯನ್ನು ಏಕಾಏಕಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಕಾನೂನು ಚೌಕಟ್ಟಿನೊಳಗೆ ಸಮಸ್ಯೆಗಳನ್ನು ಪರಿಹರಿಸಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಯೋಜನೆಯ ಲಾಭ ಅಥವಾ ದುರ್ಬಳಕೆಯ ಕುರಿತು ಪ್ರತ್ಯೇಕವಾಗಿ ಪರಿಶೀಲಿಸಬಹುದು ಎಂದು ತಿಳಿಸಿದರು.

ಬಿಡದಿ ಟೌನ್‌ಶಿಪ್: ಪ್ರತಿಪಕ್ಷಗಳಿಗೆ ಪ್ರತಿಭಟಿಸುವ ಹಕ್ಕಿದೆ

ಬಿಡದಿ ಟೌನ್‌ಶಿಪ್ ವಿರೋಧಿಸಿ ಬಿಜೆಪಿ–ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪ್ರತಿಪಕ್ಷಗಳಿಗೆ ಪ್ರತಿಭಟನೆ ನಡೆಸುವ ಹಕ್ಕಿದೆ. ಬಿಡದಿಯಲ್ಲಿ ಬೃಹತ್ ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪಿಸುವ ಪ್ರಸ್ತಾವವಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇಂತಹ ಅಭಿವೃದ್ಧಿ ಯೋಜನೆಗಳನ್ನು ಪ್ರತಿಪಕ್ಷಗಳು ರಚನಾತ್ಮಕ ದೃಷ್ಟಿಕೋನದಿಂದ ನೋಡುವುದು ಉತ್ತಮ ಎಂದರು.

ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಬೆಂಬಲ

ತುಮಕೂರಿನಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಸ್ಥಾಪಿಸುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಪ್ರಸ್ತಾವಕ್ಕೆ ಆರಂಭದಿಂದಲೂ ತಮ್ಮ ಬೆಂಬಲವಿದೆ ಎಂದು ಪರಮೇಶ್ವರ್ ಹೇಳಿದರು. ಯೋಜನೆಯ ತಾಂತ್ರಿಕ ಸಾಧ್ಯತೆ ಹಾಗೂ ಒಟ್ಟಾರೆ ಉಪಯುಕ್ತತೆಯನ್ನು ಪರಿಶೀಲಿಸಬೇಕಿದೆ. ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಸುಮಾರು 20 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಕ್ಕೂ ನೆರವಾಗಲಿದೆ. ಅಂತಿಮವಾಗಿ ಯೋಜನೆಯ ತಾಂತ್ರಿಕ ಸಾಧ್ಯತೆಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪರಿಶೀಲಿಸಲಿದೆ ಎಂದು ಅವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande