
ಕೋಲಾರ, 10 ಆಗಷ್ಟ್ (ಹಿ.ಸ):
ಆ್ಯಂಕರ್ : ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ನೀಡಿದ ಹೆಗ್ಗಳಿಕೆ ಕೋಲಾರ ಜಿಲ್ಲೆಗಿದೆ. ಬರಗಾಲದ ನಡುವೆಯೂ ಪಾತಾಳಕ್ಕೆ ಕುಸಿದಿರುವ ನೀರನ್ನು ಬಸಿದು, ಬೆಂಗಳೂರಿಗೆ ಹಾಲು, ತರಕಾರಿ ಹಾಗೂ ರೇಷ್ಮೆ ಸರಬರಾಜು ಮಾಡುವ ಮೂಲಕ ಜಿಲ್ಲೆಯ ರೈತರು ಅಪಾರ ಸ್ವಾಭಿಮಾನ ಮೆರೆದಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು.
ಸೋಮವಾರ ಮಾಲೂರು ತಾಲೂಕಿನಲ್ಲಿ ಸುಮಾರು ₹೩,೬೦೦ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಲೋಕಾರ್ಪಣೆ ಮಾಡಿ, ವಿವಿಧ ಇಲಾಖೆಗಳ ಸೌಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ಬರಗಾಲದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ಆತ್ಮಹತ್ಯೆಯಂತಹ ಕಠಿಣ ಹಾದಿ ತುಳಿಯುತ್ತಿದ್ದಾರೆ. ಆದರೆ, ಕೋಲಾರ ಜಿಲ್ಲೆಯ ರೈತರು ಎದೆಗುಂದದೆ, ಕಠಿಣ ಪರಿಶ್ರಮದಿಂದ ಬೆಂಗಳೂರಿಗೆ ಅಗತ್ಯವಿರುವ ಹಾಲು, ತರಕಾರಿ ಮತ್ತು ರೇಷ್ಮೆಯನ್ನು ಉತ್ಪಾದಿಸಿ ಸರಬರಾಜು ಮಾಡುತ್ತಿದ್ದಾರೆ. ಇಂತಹ ಸ್ವಾಭಿಮಾನಿ ರೈತರ ಶ್ರಮಕ್ಕೆ ನಮ್ಮ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೃಹತ್ ಬೆಂಗಳೂರು ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಕೃಷ್ಣಬೈರೇಗೌಡ ಮಾತನಾಡಿ, ಕೋಲಾರ ಜಿಲ್ಲೆ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆಗೆ ಶಾಶ್ವತವಾಗಿ ಎತ್ತಿನಹೊಳೆ ನೀರನ್ನು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ₹೩,೬೦೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಹಾಗೂ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಡಾ. ಸುಧಾಕರ್, ಕೊತ್ತೂರು ಮಂಜುನಾಥ್, ಅನಿಲ್ ಕುಮಾರ್, ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ ಸೇರಿದಂತೆ ನಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್