
ಹುಬ್ಬಳ್ಳಿ, 10 ಆಗಸ್ಟ್ (ಹಿ.ಸ.):
ಆ್ಯಂಕರ್:ಸ್ವಾತಂತ್ರ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯಲ್ಲಿ ಸತತ 18ನೇ ಬಾರಿಗೆ ತಿರಂಗಯಾತ್ರೆ ಆಯೋಜಿಸಲಾಗಿದೆ. ಹಮ್ ಭಾರತಿ ಫೌಂಡೇಶನ್, ಚಿನ್ಮಯ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 12ರಂದು ತಿರಂಗಯಾತ್ರೆ ನಡೆಯಲಿದೆ.
ಬೆಳಗ್ಗೆ 10.30ಕ್ಕೆ ಚಿನ್ಮಯ ಕಾಲೇಜು ಆವರಣದಿಂದ ಯಾತ್ರೆ ಆರಂಭವಾಗಲಿದೆ. ಚಿನ್ಮಯ ಮಿಷನ್ ಹುಬ್ಬಳ್ಳಿಯ ಆಚಾರ್ಯ ಪರಮಪೂಜ್ಯ ಸ್ವಾಮಿ ಮಾಜ್ಯ ಕೃತಾತ್ಯಾನಂದರು ಮುಖ್ಯ ಅತಿಥಿಗಳಾಗಿ ಆಗಮಿಸಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
700ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು 150 ಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ ತಿರಂಗಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. 30 ಕಲಾವಿದರ ತಂಡವೂ ಯಾತ್ರೆಯಲ್ಲಿ ಪಾಲ್ಗೊಳ್ಳಲಿದೆ.
ಚಿನ್ಮಯ ಕಾಲೇಜು ಆವರಣದಿಂದ ಆರಂಭವಾಗುವ ಯಾತ್ರೆ ರಮೇಶ್ ಭವನ, ಸರ್ವೋದಯ ವೃತ್ತ, ಕಾನ್ವೆಂಟ್ ಶಾಲೆ ಮಾರ್ಗವಾಗಿ ರೈಲ್ವೆ ನಿಲ್ದಾಣದ ಪ್ರವೇಶದ್ವಾರದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯ ಬಳಿ ಮುಕ್ತಾಯಗೊಳ್ಳಲಿದೆ.
ಅಲ್ಲಿ 21 ಅಡಿ ಉದ್ದ ಮತ್ತು 14 ಅಡಿ ಅಗಲದ ಬೃಹತ್ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ರಾಷ್ಟ್ರಗೀತೆ ಹಾಡಲಾಗುವುದು. ದೇಶದ ಪ್ರತಿಯೊಂದು ಕುಟುಂಬವೂ ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಂತೆ ಕರೆ ನೀಡಲಾಗುವುದು.
ಚಿನ್ಮಯ ಶಿಕ್ಷಣ ಸಂಸ್ಥೆಗಳಲ್ಲಿ ಆಗಸ್ಟ್ 7ರಿಂದ 15ರವರೆಗೆ ‘ತಿರಂಗ ಸಪ್ತಾಹ’ ಆಚರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಖಾದಿಯಿಂದ ತಯಾರಿಸಿದ ಚಿಕ್ಕ ತ್ರಿವರ್ಣ ಧ್ವಜವನ್ನು ಧರಿಸಲಿದ್ದಾರೆ. ಖಾದಿ ಉತ್ಪನ್ನಗಳ ಬಳಕೆ ಮತ್ತು ಖಾದಿ ಗ್ರಾಮೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಮಕ್ಕಳಲ್ಲಿ ರಾಷ್ಟ್ರಾಭಿಮಾನ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರಿಚಯಿಸುವುದು, ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನವನ್ನು ಬೆಳೆಸುವುದು ತಿರಂಗಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.