ಮಳೆಗಾಗಿ ದೇವರ ಮೊರೆ ಹೋದ ರೈತರು – ಗ್ರಾಮದೇವಿಯರಿಗೆ ವಿಶೇಷ ಪೂಜೆ ಮೂಲಕ ಮಳೆಯ ಪ್ರಾರ್ಥನೆ
ವಿಜಯಪುರ, 09 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ರೈತರು ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ವಿವಿಧ ಬೆಳೆಗಳು ಮಳೆ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿದ್ದು,
ಪೂಜೆ


ವಿಜಯಪುರ, 09 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ರೈತರು ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ವಿವಿಧ ಬೆಳೆಗಳು ಮಳೆ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿದ್ದು, ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿವೆ.

ಈ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲಿ ಹಾಗೂ ಹೊಲಗಳಲ್ಲಿರುವ ಬೆಳೆಗಳು ಉಳಿಯಲಿ ಎಂದು ಪ್ರಾರ್ಥಿಸಿ ನಾಲತವಾಡ ಪಟ್ಟಣದ ರೈತರು, ಭಕ್ತರು ಹಾಗೂ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಗ್ರಾಮದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಮೊರೆ ಹೋದರು.

ಬೆಳಗ್ಗೆಯೇ ಗಂಗಾಸ್ಥಳಕ್ಕೆ ತೆರಳಿದ ಭಕ್ತರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಪವಿತ್ರ ಜಲ ತುಂಬಿದ ಕುಂಭಗಳನ್ನು ಹೊತ್ತು ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಗ್ರಾಮಕ್ಕೆ ಆಗಮಿಸಿದರು. ಬಳಿಕ ಗ್ರಾಮದೇವಿಯರಾದ ಗದ್ದೆಮ್ಮ ಹಾಗೂ ದ್ಯಾಮವ್ವ ದೇವಿಯರ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಅರಿಶಿಣ, ಕುಂಕುಮ, ಹೂಮಾಲೆಗಳೊಂದಿಗೆ ಪೂಜೆ, ಅಭಿಷೇಕ, ಮಂತ್ರಪಠಣ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಹಾಗೂ ನೈವೇದ್ಯ ಸಮರ್ಪಣೆ ನಡೆಸಲಾಯಿತು.

ಅನಂತರ ದೇವಸ್ಥಾನದ ಪನ್ನೊಳಗಿಗೆ ಹೂಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಂಗಾಸ್ಥಳದಿಂದ ತಂದಿದ್ದ ಕುಂಭಗಳ ಪವಿತ್ರ ನೀರನ್ನು ಪನ್ನೊಳಗಿ ನಾಲೆಗೆ ಸುರಿದು ಮಳೆಯಾಗಲಿ ಎಂಬ ಸಂಕಲ್ಪದೊಂದಿಗೆ ಭಕ್ತರು ಪ್ರಾರ್ಥಿಸಿದರು. ಈ ವೇಳೆ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿ ದೇವರ ಕೃಪೆಯಿಂದ ಉತ್ತಮ ಮಳೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ದೇವಸ್ಥಾನದಲ್ಲಿ ತೀರ್ಥಪ್ರಸಾದ ವಿತರಣೆ, ಭಂಡಾರ ಎರಚಾಟ, ಡೊಳ್ಳು ಕುಣಿತ, ಭಜನಾ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಹಿಳೆಯರು, ಯುವಕರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಳೆಯಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪಣ್ಣ ಗಂಗನಗೌಡ್ರ ಹಾಗೂ ನಿಂಗಣ್ಣ ಕುರಿ, ಬರಗಾಲ ಸಂಭವಿಸುವ ಮುನ್ಸೂಚನೆ ಕಂಡಾಗಲೆಲ್ಲ ನಮ್ಮ ಹಿರಿಯರು ಗ್ರಾಮದಲ್ಲಿ ಪನ್ನೊಳಗಿ ಪೂಜೆ ನಡೆಸುವ ಸಂಪ್ರದಾಯ ಬೆಳೆಸಿದ್ದಾರೆ. ಮಳೆಯಾಗಲಿ, ರೈತರ ಬದುಕು ಹಸನಾಗಲಿ ಎಂಬ ಆಶಯದಿಂದ ಆ ಸಂಪ್ರದಾಯವನ್ನು ನಾವು ಇಂದಿಗೂ ಮುಂದುವರಿಸುತ್ತಿದ್ದೇವೆ. ದೇವರ ಕೃಪೆಯಿಂದ ಶೀಘ್ರದಲ್ಲೇ ಉತ್ತಮ ಮಳೆಯಾಗಿ ರೈತರ ಬೆಳೆಗಳು ಉಳಿಯಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ ಎಂದು ಹೇಳಿದರು.

ಮಳೆಗಾಗಿ ರೈತರು ಹಾಗೂ ಗ್ರಾಮಸ್ಥರು ಒಗ್ಗಟ್ಟಿನಿಂದ ನಡೆಸಿದ ಈ ವಿಶೇಷ ಪೂಜೆ ಗ್ರಾಮೀಣ ಭಾಗದ ಸಂಪ್ರದಾಯ, ಭಕ್ತಿ ಮತ್ತು ಕೃಷಿಯ ಮೇಲಿನ ಅವಲಂಬನೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande