
ಬೆಂಗಳೂರು, 09 ಜುಲೈ (ಹಿ.ಸ.)
ಆ್ಯಂಕರ್:
ವಿಶೇಷ ಮತದಾರರ ಪರಿಷ್ಕರಣೆ ಪ್ರಕ್ರಿಯೆ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ನೇರ ಪಾತ್ರವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಎಸ್ಐಆರ್ ಕುರಿತು ಮಾತನಾಡಿದ ಅವರು, ಚುನಾವಣಾ ಆಯೋಗ ಕೇಳಿದ ಸಿಬ್ಬಂದಿಯನ್ನು ಮಾತ್ರ ರಾಜ್ಯ ಸರ್ಕಾರ ಒದಗಿಸಿದೆ. ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುವ ಜವಾಬ್ದಾರಿ ಬಿಎಲ್ಒಗಳದ್ದು. ಒಂದು ಸ್ಥಳದಲ್ಲೇ ಕುಳಿತು ನಮೂನೆಗಳನ್ನು ವಿತರಿಸಿದ್ದರೆ ಅದು ಅವರ ತಪ್ಪು. ಇಂತಹ ಪ್ರಕರಣಗಳು ಕಂಡುಬಂದರೆ ಚುನಾವಣಾ ಆಯೋಗವೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು, ಎಂದು ಹೇಳಿದರು.
ಕೆಲವು ಶಾಸಕರು ಗಣತಿ ನಮೂನೆಗಳ ಮೇಲೆ ತಮ್ಮ ಭಾವಚಿತ್ರ ಅಂಟಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ಬಿಎಲ್ಒಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸಬೇಕು. ಅದು ಸರಿಯಾಗಿ ನಡೆದಿಲ್ಲದಿದ್ದರೆ ಚುನಾವಣಾ ಆಯೋಗವೇ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ, ಎಂದು ಉತ್ತರಿಸಿದರು.
ತುಮಕೂರಿನಲ್ಲಿ ಮಸೀದಿಗಳು ಹಾಗೂ ಶಾದಿ ಮಹಲ್ಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಬಿಎಲ್ಒಗಳ ಜವಾಬ್ದಾರಿ. ಈ ವಿಚಾರವನ್ನು ಚುನಾವಣಾ ಆಯೋಗ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು, ಎಂದು ಹೇಳಿದರು.
ಪಂಚಾಯಿತಿ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಪಂಚಾಯಿತಿ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ. ಚುನಾವಣೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿಗದಿಪಡಿಸಲಾಗುತ್ತದೆ, ಎಂದರು.
ಹೇಮಾವತಿ ಎಕ್ಸ್ಪ್ರೆಸ್ ಕಾಲುವೆ ಯೋಜನೆ ಕುರಿತು ಮಾತನಾಡಿದ ಅವರು, ಈ ಯೋಜನೆಗೆ ₹900 ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಈಗಾಗಲೇ ಸಾಕಷ್ಟು ಹಣ ವೆಚ್ಚವಾಗಿರುವುದರಿಂದ ಯೋಜನೆಯನ್ನು ಈ ಹಂತದಲ್ಲಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಕಾಮಗಾರಿಯನ್ನು ಮುಂದುವರಿಸಲಾಗುತ್ತದೆ, ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / SNEHA K