ಉಕ್ಕಿ ಹರಿದ ಘಟಪ್ರಭಾ ನದಿ: ನಂದಗಾಂವ–ಅವರಾದಿ ಸಂಪರ್ಕ ಸೇತುವೆ ಜಲಾವೃತ, ಸಂಚಾರ ಸ್ಥಗಿತ
ಬಾಗಲಕೋಟೆ, 09 ಜುಲೈ (ಹಿ.ಸ.) ಆ್ಯಂಕರ್ : ಘಟಪ್ರಭಾ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಾಗುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಸಮೀಪದ ನಂದಗಾಂವ–ಅವರಾದಿ ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಮುಂಜಾನೆಯಿಂದಲೇ ವಾಹನ ಹಾಗೂ ಸಾರ್ವಜನಿಕರ ಸಂಚಾ
ಬ್ಯಾಂಡ್


ಬಾಗಲಕೋಟೆ, 09 ಜುಲೈ (ಹಿ.ಸ.)

ಆ್ಯಂಕರ್ : ಘಟಪ್ರಭಾ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಾಗುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಸಮೀಪದ ನಂದಗಾಂವ–ಅವರಾದಿ ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಮುಂಜಾನೆಯಿಂದಲೇ ವಾಹನ ಹಾಗೂ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನದಿಯಲ್ಲಿ ಹರಿವಿನ ಪ್ರಮಾಣ ಏರಿಕೆಯಾಗಿದ್ದರಿಂದ ಸೇತುವೆಯ ಮೇಲೆಯೇ ಸುಮಾರು 2 ರಿಂದ 3 ಅಡಿಗೂ ಅಧಿಕ ನೀರು ಹರಿಯುತ್ತಿದೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. ಯಾವುದೇ ವಾಹನ ಅಥವಾ ಸಾರ್ವಜನಿಕರು ಸೇತುವೆ ದಾಟದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.

ಸೇತುವೆ ಜಲಾವೃತಗೊಂಡಿರುವುದರಿಂದ ಮಹಾಲಿಂಗಪುರ ಪಟ್ಟಣದಿಂದ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿರುವ ಮೂಡಲಗಿ ತಾಲೂಕಿನ ಅವರಾದಿ, ಅಳ್ಳಿಮಟ್ಟಿ, ಯರಗುದ್ರಿ, ತಿಮ್ಮಾಪೂರ, ಹೊಸ ಯರಗುದ್ರಿ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು ಹಾಗೂ ನಿತ್ಯ ಸಂಚರಿಸುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಘಟಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿಯೂ ಮಳೆ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಜಲಾವೃತ ಸೇತುವೆ ದಾಟುವ ಪ್ರಯತ್ನ ಮಾಡಬಾರದು, ಸುರಕ್ಷಿತ ಪರ್ಯಾಯ ಮಾರ್ಗಗಳನ್ನು ಬಳಸಬೇಕು ಹಾಗೂ ಯಾವುದೇ ರೀತಿಯ ಸಾಹಸಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿವೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande