
ವಿಜಯಪುರ, 09 ಜುಲೈ (ಹಿ.ಸ.)
ಆ್ಯಂಕರ್ : ವಿಜಯಪುರ ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಿದ್ದು, ನಗರದಲ್ಲಿ ಬಹುನಿರೀಕ್ಷಿತ ರೈಲ್ವೆ ಪಿಟ್ ಲೈನ್ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಈ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮವು ಶೀಘ್ರದಲ್ಲೇ ನಡೆಯಲಿದ್ದು, ವಿಜಯಪುರದ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿ ರೈಲ್ವೆ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಬೇಲಾ ಮೀನಾ ಅವರೊಂದಿಗೆ ಮಹತ್ವದ ಚರ್ಚೆ ನಡೆಸಲಾಗಿದ್ದು, ವಿಜಯಪುರ ರೈಲು ನಿಲ್ದಾಣ ಅಥವಾ ಅಲಿಯಾಬಾದ್ ಗೂಡ್ಸ್ ಶೆಡ್ ಸಮೀಪ ಪಿಟ್ ಲೈನ್ ನಿರ್ಮಾಣಕ್ಕೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಸಿದ ಪ್ರಯತ್ನಕ್ಕೆ ಈಗ ಫಲ ದೊರೆತಿದ್ದು, ಈ ಯೋಜನೆಗೆ ಅಧಿಕೃತ ಅನುಮೋದನೆ ಸಿಕ್ಕಿರುವುದು ಜಿಲ್ಲೆಯ ಜನತೆಗೆ ಸಂತಸದ ಸುದ್ದಿಯಾಗಿದೆ.
ರೈಲ್ವೆ ಪಿಟ್ ಲೈನ್ ನಿರ್ಮಾಣವಾದ ನಂತರ ವಿಜಯಪುರದಿಂದಲೇ ಹೊಸ ರೈಲುಗಳ ಸೇವೆ ಆರಂಭಿಸಲು ಅವಕಾಶ ಸಿಗಲಿದೆ.
ವಿಶೇಷವಾಗಿ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ನೇರ ರೈಲುಗಳ ಸಂಚಾರ ಆರಂಭಿಸುವ ಸಾಧ್ಯತೆ ಹೆಚ್ಚಲಿದೆ. ಇದರಿಂದ ಜಿಲ್ಲೆಯ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೂ ಹೊಸ ಚೈತನ್ಯ ಸಿಗಲಿದೆ.
ಪ್ರಸ್ತುತ ಹಲವು ರೈಲುಗಳ ನಿರ್ವಹಣೆಗಾಗಿ ಇತರ ನಗರಗಳ ಪಿಟ್ ಲೈನ್ಗಳನ್ನು ಅವಲಂಬಿಸಬೇಕಾಗಿರುವ ಪರಿಸ್ಥಿತಿ ಇದೆ.
ವಿಜಯಪುರದಲ್ಲಿಯೇ ಈ ಸೌಲಭ್ಯ ನಿರ್ಮಾಣವಾದರೆ ರೈಲುಗಳ ಸ್ವಚ್ಛತೆ, ತಾಂತ್ರಿಕ ನಿರ್ವಹಣೆ ಹಾಗೂ ಕಾರ್ಯಾಚರಣೆ ಸುಲಭಗೊಳ್ಳಲಿದ್ದು, ಹೊಸ ರೈಲುಗಳ ಆರಂಭಕ್ಕೂ ವೇಗ ಸಿಗಲಿದೆ.
ಜಿಲ್ಲೆಯ ಜನಪ್ರತಿನಿಧಿಗಳು, ರೈಲ್ವೆ ಅಭಿವೃದ್ಧಿಗಾಗಿ ಹೋರಾಟ ನಡೆಸಿದ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಾರೆ, ವಿಜಯಪುರಕ್ಕೆ ರೈಲ್ವೆ ಪಿಟ್ ಲೈನ್ ನಿರ್ಮಾಣವು ಜಿಲ್ಲೆಯ ಸಾರಿಗೆ ಮೂಲಸೌಕರ್ಯಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ವಿಜಯಪುರವನ್ನು ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಕೇಂದ್ರವನ್ನಾಗಿ ರೂಪಿಸುವಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande