ವಿಜಯಪುರ: ಶೌಚಾಲಯ ನಿರ್ಮಾಣಕ್ಕೆ ಜಾಗ ನೀಡಲು ಆಗ್ರಹಿಸಿ ಮದರಿ ಗ್ರಾಮದ ಮಹಿಳೆಯರ ಧರಣಿ
ವಿಜಯಪುರ, 09 ಜುಲೈ (ಹಿ.ಸ.) ಆ್ಯಂಕರ್ : ಶೌಚಾಲಯ ನಿರ್ಮಾಣಕ್ಕಾಗಿ ಸೂಕ್ತ ಜಾಗವನ್ನು ತಕ್ಷಣ ಗುರುತಿಸಿ ನೀಡುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮದರಿ ಗ್ರಾಮದ ಮಹಿಳೆಯರು ಸಿಂದಗಿ ಆಡಳಿತ ಸೌಧದ ಎದುರು ಧರಣಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಸಾರ್ವಜನಿಕ ಶೌಚ
ಪ್ರೊಟೆಸ್ಟ್


ವಿಜಯಪುರ, 09 ಜುಲೈ (ಹಿ.ಸ.)

ಆ್ಯಂಕರ್ : ಶೌಚಾಲಯ ನಿರ್ಮಾಣಕ್ಕಾಗಿ ಸೂಕ್ತ ಜಾಗವನ್ನು ತಕ್ಷಣ ಗುರುತಿಸಿ ನೀಡುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮದರಿ ಗ್ರಾಮದ ಮಹಿಳೆಯರು ಸಿಂದಗಿ ಆಡಳಿತ ಸೌಧದ ಎದುರು ಧರಣಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯದ ಕೊರತೆಯಿಂದ ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಬಹಿರಂಗ ಶೌಚಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದರಿಂದ ಮಹಿಳೆಯರ ಗೌರವ, ಸುರಕ್ಷತೆ ಹಾಗೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಶೌಚಾಲಯ ನಿರ್ಮಾಣಕ್ಕೆ ಜಾಗ ಗುರುತಿಸುವ ಕಾರ್ಯ ವಿಳಂಬವಾಗುತ್ತಿರುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

ಧರಣಿಯಲ್ಲಿ ಭಾಗವಹಿಸಿದ್ದ ಮಹಿಳೆಯರು, ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಶೌಚಾಲಯ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಗುರುತಿಸಿ ಶೀಘ್ರ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮಹಿಳೆಯರ ಮನವಿಯನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಧರಣಿಯಲ್ಲಿ ಗ್ರಾಮದ ಮಹಿಳೆಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಸರ್ಕಾರ ಮತ್ತು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಯನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande