ಕೇವಲ ಮೂರು ದಿನಗಳಲ್ಲಿ ಕೃಷ್ಣಾ ನದಿಯ ಚಿತ್ರಣ ಬದಲು: ಶ್ರಮಬಿಂದು ಸಾಗರ ಭರ್ತಿ, ಉಕ್ಕಿ ಹರಿದ ಕೃಷ್ಣೆ
ಬಾಗಲಕೋಟೆ, 09 ಜುಲೈ (ಹಿ.ಸ.) ಆ್ಯಂಕರ್ : ಮಹಾರಾಷ್ಟ್ರದ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸಮೀಪದ ಶ್ರಮಬಿಂದು ಸಾಗರ (ಬ್ಯಾರೇಜ್) ಸಂಪೂರ್ಣ ಭರ್ತಿಯಾಗಿದ್ದು, ಕೇವಲ ಮೂರು ದಿನಗಳ ಅ
ನಡಿ ತುಂಬಿದೆ


ಬಾಗಲಕೋಟೆ, 09 ಜುಲೈ (ಹಿ.ಸ.)

ಆ್ಯಂಕರ್ : ಮಹಾರಾಷ್ಟ್ರದ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸಮೀಪದ ಶ್ರಮಬಿಂದು ಸಾಗರ (ಬ್ಯಾರೇಜ್) ಸಂಪೂರ್ಣ ಭರ್ತಿಯಾಗಿದ್ದು, ಕೇವಲ ಮೂರು ದಿನಗಳ ಅವಧಿಯಲ್ಲಿ ಕೃಷ್ಣಾ ನದಿಯ ಚಿತ್ರಣವೇ ಸಂಪೂರ್ಣ ಬದಲಾಗಿದೆ.

ಕಳೆದ ವಾರದವರೆಗೂ ನೀರಿನ ಕೊರತೆಯಿಂದ ಬಹುತೇಕ ಬರಿದಾಗಿದ್ದ ಬ್ಯಾರೇಜ್ ಇದೀಗ ಸಂಪೂರ್ಣ ತುಂಬಿ ಉಕ್ಕಿ ಹರಿಯುತ್ತಿದ್ದು, ನದಿಯ ಎರಡೂ ದಡಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ದೃಶ್ಯ ಸ್ಥಳೀಯರು ಹಾಗೂ ರೈತರಲ್ಲಿ ಸಂತಸ ಮೂಡಿಸಿದ್ದು, ಪ್ರಕೃತಿಯ ಅಚ್ಚರಿಯ ಬದಲಾವಣೆಗೆ ಸಾಕ್ಷಿಯಾಗಿದೆ.

4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಶ್ರಮಬಿಂದು ಸಾಗರ ಸಂಪೂರ್ಣ ಭರ್ತಿಯಾಗಿದ್ದು, ಮೇಲ್ಭಾಗದ ಹಿಪ್ಪರಗಿ ಜಲಾಶಯದಿಂದ ಸುಮಾರು 98 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದೇ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಪರಿಣಾಮ ನದಿಯಲ್ಲಿ ಭಾರೀ ಹರಿವು ಕಂಡುಬರುತ್ತಿದೆ.

ಮಹಾರಾಷ್ಟ್ರ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಕೃಷ್ಣಾ ನದಿಯ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿಯೂ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ಬ್ಯಾರೇಜ್ ವೀಕ್ಷಣೆಗೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಉಕ್ಕಿ ಹರಿಯುತ್ತಿರುವ ನೀರಿನ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ ನದಿ ತೀರ ಹಾಗೂ ಬ್ಯಾರೇಜ್ ಪ್ರದೇಶಗಳಲ್ಲಿ ಅನಗತ್ಯವಾಗಿ ಪ್ರವೇಶಿಸದೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಒಟ್ಟಾರೆ, ಕೆಲವೇ ದಿನಗಳ ಹಿಂದೆ ನೀರಿನ ಅಭಾವದಿಂದ ಬತ್ತಿಹೋಗಿದ್ದ ಕೃಷ್ಣಾ ನದಿ ಇಂದು ಜೀವಕಳೆ ಪಡೆದು ಉಕ್ಕಿ ಹರಿಯುತ್ತಿರುವುದು ಪ್ರಕೃತಿಯ ಅದ್ಭುತ ವೈವಿಧ್ಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ರೈತ ಸಮುದಾಯದಲ್ಲೂ ಉತ್ತಮ ಮಳೆಯ ನಿರೀಕ್ಷೆ ಹೆಚ್ಚಿದ್ದು, ಕೃಷಿ ಚಟುವಟಿಕೆಗಳಿಗೆ ಈ ಬೆಳವಣಿಗೆ ಆಶಾದಾಯಕವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande