ಮತದಾರರ ಪಟ್ಟಿ ಪರಿಷ್ಕರಣೆ : ಜಿಲ್ಲಾಧಿಕಾರಿಗಳ ಮಹತ್ವದ ಸಭೆ
ಕೊಪ್ಪಳ , 09 ಜುಲೈ (ಹಿ.ಸ.): ಆ್ಯಂಕರ್ : ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಇದುವರೆಗಿನ ಪ್ರಗತಿಯ ಬಗ್ಗೆ ಮಾಹಿತಿ ನೀಡಲು, ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮಾನ್ಯತೆ
Electoral Roll Revision: Important meeting of District Collectors


ಕೊಪ್ಪಳ , 09 ಜುಲೈ (ಹಿ.ಸ.):

ಆ್ಯಂಕರ್ : ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಇದುವರೆಗಿನ ಪ್ರಗತಿಯ ಬಗ್ಗೆ ಮಾಹಿತಿ ನೀಡಲು, ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಬಿಎಲ್ಓಗಳು ಮನೆಮನೆ ಭೇಟಿ ನೀಡಿ ಗಣತಿ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಿದ ವಿವರ ಹಾಗೂ ಡಿಜಿಟಲೀಕರಣದ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿಗಳು ವಿವರಿಸಿದರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರಿಗೆ ಗಣತಿ ನಮೂನೆ ವಿತರಣೆ ವೇಳೆಯಲ್ಲಿ ಜುಲೈ 8ರ ಸಂಜೆ 4 ಗಂಟೆವರೆಗೆ 46 ಗೈರು, 1182 ಖಾಯಂ ಸ್ಥಳಾಂತರ, 1421 ಮೃತರು, 759 ಡುಪ್ಲಿಕೇಟ್, 9 ಇತರೆ ಎಂಬುದಾಗಿ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಒಟ್ಟು 3417 ಯುಇಎಫ್ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 11,90,214 ಮತದಾರರಿದ್ದು, ಇದುವರೆಗೆ 11,51,088 ಮತದಾರರಿಗೆ ಮನೆಮನೆ ಭೇಟಿ ವೇಳೆ ಗಣತಿ ನಮೂನೆಗಳನ್ನು ಹಂಚಿಕೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಶೇ.96.71 ರಷ್ಟು ಪ್ರಗತಿಯಾಗಿದೆ ಎಂದು ತಿಳಿಸಿದರು.

ಮತದಾರರು ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸ್ವೀಕರಿಸಲಾಗುತ್ತಿದ್ದು, ಇದುವರೆಗೆ 2,78,346 ಗಣತಿ ನಮೂನೆಗಳನ್ನು ಜಿಟಲೀಕರಣ ಮಾಡಲಾಗಿದೆ. ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳವಾರು ಎಸ್ಐಆರ್ ಪ್ರಗತಿಯು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.99.52 ರಷ್ಟು ಗಣತಿ ನಮೂನೆಗಳ ವಿತರಣೆ ಮಾಡಲಾಗಿದೆ. ಕುಷ್ಟಗಿ ಕಷೇತ್ರದಲ್ಲಿ ಶೇ.98.55 ರಷ್ಟು, ಯಲಬುರ್ಗಾ ಕ್ಷೇತ್ರದಲ್ಲಿ ಶೇ.98.43 ರಷ್ಟು, ಕೊಪ್ಪಳ ಕ್ಷೇತ್ರದಲ್ಲಿ ಶೇ.94.35 ರಷ್ಟು ಮತ್ತು ಗಂಗಾವತಿ ಕ್ಷೇತ್ರದಲ್ಲಿ ಶೇ.94.64ರಷ್ಟು ಆಗಿದೆ ಎಂದು ವಿವರಿಸಿದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿದಾನಸಭಾ ಕ್ಷೇತ್ರವಾರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾಹಿತಿ ನೀಡಲು ಮತದಾರರ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ಕೈಗೊಳ್ಳುವುದರಿಂದ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ಕೈಗೊಳ್ಳಲು ಮತ್ತಷ್ಟು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಯಾವುದೇ ಅಕ್ರಮ ಅಥವಾ ನಕಲಿ ಹೆಸರುಗಳು ಸೇರ್ಪಡೆಯಾಗದಂತೆ ತಡೆಯಲು ರಾಜಕೀಯ ಪಕ್ಷಗಳ ಸಹಕಾರವು ಸಹ ಅಗತ್ಯವಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಓ) ನಡೆಸುವ ಮನೆ-ಮನೆ ಭೇಟಿ ಕಾರ್ಯಕ್ಕೆ ಅನುಕೂಲವಾಗುವಂತೆ ಮತ್ತು ಸಹಕಾರಕ್ಕೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಬೂತ್ ಮಟ್ಟದ ಏಜೆಂಟರನ್ನು (ಬಿಎಲ್ಎ) ನೇಮಕ ಮಾಡುವ ಪ್ರಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಬಿಎಲ್ಓಗಳಿಗೆ ಗೌರವ ಧನ: ವಿಧಾನಸಭಾ ಕ್ಷೇತ್ರವಾರು, ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಓ) ತಲಾ 12,000 ರೂ.ಗಳಂತೆ ಗೌರವ ಧನ ಹಂಚಿಕೆ ಮಾಡಲಾಗಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಎಸ್ಐಆರ್ ಕಾರ್ಯಕ್ಕೆ ಮೆಚ್ಚುಗೆ: ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಅತ್ಯಂತ ಅಚ್ಚುಕಟ್ಟಾಗಿ ನಡೆದಿದ್ದು ಸಂತಷ ತಂದಿದೆ ಎಂದು ಇದೆ ವೇಳೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಚುನಾವಣಾ ಶಾಖೆಯ ತಹಶೀಲ್ದಾರ ರವಿ ವಸ್ತ್ರದ್, ಕೊಪ್ಪಳ ಜಿಲ್ಲೆಯ ಮಾನ್ಯತೆ ಪಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೃಷ್ಣ ಇಟ್ಟಂಗಿ, ರಾಜು ಬಾಕಳೆ, ಕೆ.ಎಸ್.ಮಲಾರಪ್ಪ, ಸುನೀಲ್ ಹೆಸರೂರ, ಮಹಾಬಾಬಲಪ್ಪ ಸೇರಿದಂತೆ ಮತ್ತಿತರರು ಚುನಾವಣಾ ಶಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande