
ಬಾಗಲಕೋಟೆ, 09 ಜುಲೈ (ಹಿ.ಸ.)
ಆ್ಯಂಕರ್ : ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷವು ಬಂಜಾರ (ಲಂಬಾಣಿ) ಸಮುದಾಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದು, ಒಳಮೀಸಲಾತಿ ಸೇರಿದಂತೆ ಹಲವು ವಿಚಾರಗಳಲ್ಲಿ ಸಮುದಾಯದ ಹಕ್ಕುಗಳನ್ನು ಕಡೆಗಣಿಸಿದೆ ಎಂದು ಮಾಜಿ ಸಚಿವ ಪ್ರಭು ಚೌಹಾಣ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಸ್ತವದಲ್ಲಿ ನಾಮಕೇವಾಸ್ತೆ ಅಹಿಂದ ನಾಯಕರು. ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಬಂಜಾರ ಸಮುದಾಯದ ಒಳಮೀಸಲಾತಿ ಹೋರಾಟದ ಬಗ್ಗೆ ಸರ್ಕಾರ ಗಂಭೀರತೆ ತೋರಿಲ್ಲ. ಸಮುದಾಯದ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸದೆ ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭಕ್ಕಾಗಿ ಸಮಾಜಗಳನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಈ ಸಂದರ್ಭದಲ್ಲಿ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಅಥವಾ ಹಿರಿಯತೆ ಹೊಂದಿರುವವರಿಗಿಂತ ಸಮಾಜದ ಪ್ರತಿನಿಧಿತ್ವಕ್ಕೆ ಆದ್ಯತೆ ನೀಡಬೇಕು. ವಿಶೇಷವಾಗಿ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರ ಬಂಜಾರ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಬಂಜಾರ ಸಮಾಜ ರಾಜ್ಯದ ವಿವಿಧ ಭಾಗಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದು, ಅಭಿವೃದ್ಧಿ ಮತ್ತು ರಾಜಕೀಯ ಪ್ರತಿನಿಧಿತ್ವದಲ್ಲಿ ಸೂಕ್ತ ಅವಕಾಶ ದೊರೆಯಬೇಕಾಗಿದೆ. ಸರ್ಕಾರ ಸಮಾಜದ ಭಾವನೆಗಳಿಗೆ ಗೌರವ ನೀಡಿ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಭು ಚೌಹಾಣ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಬಂಜಾರ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande