ಬಾಗಲಕೋಟೆಯಲ್ಲಿ ಬಂಜಾರ ಜನಾಂದೋಲನ ಯಾತ್ರೆಗೆ ಚಾಲನೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಖಂಡರ ವಾಗ್ದಾಳಿ
ಬಾಗಲಕೋಟೆ, 09 ಜುಲೈ (ಹಿ.ಸ.) ಆ್ಯಂಕರ್ : ಬಂಜಾರ ಸಮಾಜದ ಹಕ್ಕುಗಳು, ಒಳಮೀಸಲಾತಿ ಹಾಗೂ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಬಂಜಾರ ಜನಾಂದೋಲನ ಯಾತ್ರೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಕ
ಚಾಲನೆ


ಬಾಗಲಕೋಟೆ, 09 ಜುಲೈ (ಹಿ.ಸ.)

ಆ್ಯಂಕರ್ : ಬಂಜಾರ ಸಮಾಜದ ಹಕ್ಕುಗಳು, ಒಳಮೀಸಲಾತಿ ಹಾಗೂ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಬಂಜಾರ ಜನಾಂದೋಲನ ಯಾತ್ರೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಹಾಗೂ ಸಾಂಪ್ರದಾಯಿಕ ನಗಾರಿ ಭಾರಿಸುವ ಮೂಲಕ ಮಾಜಿ ಸಚಿವ ಪ್ರಭು ಚೌಹಾಣ್ ಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಭು ಚೌಹಾಣ್, ಕಾಂಗ್ರೆಸ್ ಸರ್ಕಾರವು ಬಂಜಾರ ಸಮಾಜದ ಬಗ್ಗೆ ಸೇಡಿನ ರಾಜಕಾರಣ ನಡೆಸುತ್ತಿದ್ದು, ಸಮಾಜದ ನ್ಯಾಯಸಮ್ಮತ ಹಕ್ಕುಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ಬಂಜಾರ ಸಮುದಾಯಕ್ಕೆ ಸಲ್ಲಬೇಕಾದ ಅವಕಾಶಗಳು ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಮಾಜಿ ಸಂಸದ ಉಮೇಶ್ ಜಾಧವ್ ಮಾತನಾಡಿ, ಬಂಜಾರ ಸಮಾಜದ ಧ್ವನಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲು ಈ ಜನಾಂದೋಲನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಮಾಜದ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದ್ದು, ಸರ್ಕಾರ ತನ್ನ ನಿಲುವು ಬದಲಿಸಬೇಕೆಂದು ಆಗ್ರಹಿಸಿದರು.

ಬಂಜಾರ ಶಕ್ತಿಪೀಠದ ಕುಮಾರ್ ಮಹಾರಾಜ್ ಮಾತನಾಡಿ, ಬಂಜಾರ ಸಮುದಾಯದ ಐಕ್ಯತೆ ಮತ್ತು ಸಂಘಟಿತ ಹೋರಾಟದ ಮೂಲಕವೇ ನ್ಯಾಯ ದೊರೆಯಲಿದೆ ಎಂದು ಹೇಳಿದರು. ಸಮಾಜದ ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಣಿಕಂಠ ರಾಠೋಡ ಸೇರಿದಂತೆ ಹಲವು ಮುಖಂಡರು ಮಾತನಾಡಿ, ಬಂಜಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸ್ಪಷ್ಟ ನೀತಿ ರೂಪಿಸಿ, ಬಾಕಿ ಉಳಿದಿರುವ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕೆಂದು ಒತ್ತಾಯಿಸಿದರು.

ಯಾತ್ರೆಯಲ್ಲಿ ಬಂಜಾರ ಸಮುದಾಯದ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಮತ್ತು ಯುವಕರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಾಂಪ್ರದಾಯಿಕ ವೇಷಭೂಷಣ, ಡೊಳ್ಳು-ನಗಾರಿ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಬಂಜಾರ ಸಮಾಜದ ಹಕ್ಕುಗಳ ರಕ್ಷಣೆ, ಒಳಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಮುಖಂಡರು ಘೋಷಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande