
ಬಾಗಲಕೋಟೆ, 09 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮಹತ್ವಾಕಾಂಕ್ಷೆಯ ಬಾಗಲಕೋಟೆ–ಕುಡಚಿ ರೈಲ್ವೆ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಭೂಸ್ವಾಧೀನ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನೆಯ ವಿವಿಧ ಹಂತಗಳ ಪ್ರಗತಿ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈತರು ಮತ್ತು ಸಂತ್ರಸ್ತರಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಯೋಜನೆಯ ಕಾಮಗಾರಿ ಯಾವುದೇ ವಿಳಂಬವಾಗದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಜೊತೆಗೆ ರೈತರ ಹಾಗೂ ಭೂ ಕಳೆದುಕೊಳ್ಳುತ್ತಿರುವ ಸಂತ್ರಸ್ತರ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿ ಹೇಳಲಾಯಿತು. ಕಾನೂನುಬದ್ಧವಾಗಿ ಹಾಗೂ ಪಾರದರ್ಶಕವಾಗಿ ಪರಿಹಾರ ವಿತರಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಸುಗಮವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.
ಯೋಜನೆ ಪೂರ್ಣಗೊಂಡ ಬಳಿಕ ಬಾಗಲಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಉತ್ತಮ ರೈಲ್ವೆ ಸಂಪರ್ಕ ದೊರೆಯಲಿದ್ದು, ವ್ಯಾಪಾರ, ಕೈಗಾರಿಕೆ, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಸಾರ್ವಜನಿಕ ಸಂಚಾರಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ರೈಲ್ವೆ ಸಂಪರ್ಕದಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಯೋಜನೆಗೆ ಸಾರ್ವಜನಿಕರ ಸಹಕಾರ ಪಡೆದು ಕೆಲಸವನ್ನು ವೇಗಗೊಳಿಸಲು ಒತ್ತು ನೀಡಲಾಯಿತು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣ ಸಾ. ಭಾಂಢಗೆ, ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ನೈರುತ್ಯ ರೈಲ್ವೆ ಉಪ ಮುಖ್ಯ ಇಂಜಿನಿಯರ್ ಆರ್. ಶಿವಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ನಾಯಕ, ಜಿಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು, ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ರೈಲ್ವೆ ಮಾರ್ಗದ ಸಂತ್ರಸ್ತರು ಉಪಸ್ಥಿತರಿದ್ದರು.
ಬಾಗಲಕೋಟೆ–ಕುಡಚಿ ರೈಲ್ವೆ ಯೋಜನೆ ಉತ್ತರ ಕರ್ನಾಟಕದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದ್ದು, ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಭೂಸ್ವಾಧೀನ ಪ್ರಕ್ರಿಯೆ ವೇಗವಾಗಿ ಪೂರ್ಣಗೊಂಡರೆ ಯೋಜನೆಯ ಕಾಮಗಾರಿಗೂ ಮತ್ತಷ್ಟು ಚುರುಕು ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande