ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಪರ್ಯಾಯ ಬೆಳೆ, ರೈತರಿಗೆ ತಜ್ಞರ ಸಲಹೆ
ಗದಗ, 09 ಜುಲೈ (ಹಿ.ಸ.) ಆ್ಯಂಕರ್:- ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಹಾಗೂ ಎಲ್ ನಿನೋ ಪರಿಣಾಮದಿಂದ ತೋಟಗಾರಿಕೆ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೈತರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವಂತೆ ತೋಟಗಾ
ಫೋಟೋ


ಗದಗ, 09 ಜುಲೈ (ಹಿ.ಸ.)

ಆ್ಯಂಕರ್:- ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಹಾಗೂ ಎಲ್ ನಿನೋ ಪರಿಣಾಮದಿಂದ ತೋಟಗಾರಿಕೆ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೈತರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವಂತೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವಿಸ್ತರಣಾ ನಿರ್ದೇಶನಾಲಯವು ಮಹತ್ವದ ಸಲಹೆಗಳನ್ನು ನೀಡಿದೆ. ಈ ಶಿಫಾರಸ್ಸುಗಳನ್ನು ರೈತರು ಕಾಲಕಾಲಕ್ಕೆ ಅನುಸರಿಸಿದರೆ ಬರದ ಪರಿಣಾಮವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಗದಗ ಜಿಲ್ಲಾ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ ನಿನೋ ಪರಿಸ್ಥಿತಿಯಿಂದ ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ಬೆಳೆ ಆಯ್ಕೆ, ನಾಟಿ, ನೀರಾವರಿ ಹಾಗೂ ಪೋಷಕಾಂಶ ನಿರ್ವಹಣೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ತರಕಾರಿ ಹಾಗೂ ಹಣ್ಣಿನ ಬೆಳೆಗಳನ್ನು ಬೆಳೆಯುವ ರೈತರು ಮುಂಚಿತವಾಗಿ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಜುಲೈ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಮಳೆಯಾದರೆ ಅಲ್ಪಾವಧಿಯ ಭೀಮಾ ರೇಡ್ ತಳಿಯ ಈರುಳ್ಳಿಯನ್ನು ನಾಟಿ ಮಾಡುವುದು ಸೂಕ್ತವಾಗಿದೆ. ಇದೇ ವೇಳೆ ಜುಲೈ ಮಧ್ಯ ಅಥವಾ ಕೊನೆಯ ಭಾಗದಲ್ಲಿ ಮಳೆಯಾದರೆ ಕೃಷ್ಣ ಪ್ರಭಾ ಹಾಗೂ ರುದ್ರ ತಳಿಯ ಮೆಣಸಿನಕಾಯಿ ಸಸಿಗಳನ್ನು ಸಿದ್ಧಪಡಿಸಿ ನಾಟಿ ಕೈಗೊಳ್ಳಲು ಸಲಹೆ ನೀಡಲಾಗಿದೆ.

ಒಂದು ವೇಳೆ ಮಳೆ ಆಗಸ್ಟ್ ಮೊದಲ ವಾರದಲ್ಲಿ ಮಾತ್ರ ಆರಂಭವಾದರೆ, ಅಜ್ವಾನ್, ಚೌಲಿಕಾಯಿ, ಸೋಯಾಬೀನ್, ಅಲಸಂದಿ ಹಾಗೂ ಹುರುಳಿ ಮೊದಲಾದ ಕಡಿಮೆ ಅವಧಿಯ ಹಾಗೂ ಕಡಿಮೆ ನೀರು ಬೇಡುವ ಬೆಳೆಗಳನ್ನು ಪರ್ಯಾಯವಾಗಿ ಬೆಳೆಯಬಹುದು. ಸಂರಕ್ಷಿತ ನೀರಾವರಿ ಸೌಲಭ್ಯ ಇರುವ ರೈತರು ಬೆಂಡೆಕಾಯಿ, ಬದನೆಕಾಯಿ, ಸೌತೆಕಾಯಿ, ಹೀರೇಕಾಯಿ ಹಾಗೂ ಹಾಗಲಕಾಯಿ ಮೊದಲಾದ ತರಕಾರಿ ಬೆಳೆಗಳನ್ನು ಬೆಳೆಯುವುದರಿಂದ ಉತ್ತಮ ಆದಾಯ ಗಳಿಸುವ ಅವಕಾಶವಿದೆ ಎಂದು ತಿಳಿಸಲಾಗಿದೆ.

ಬಿತ್ತನೆಗೂ ಮುನ್ನ ರೈತರು ಅಲ್ಪಾವಧಿಯ ತಳಿಗಳನ್ನು ಆಯ್ಕೆ ಮಾಡುವುದು, ಸಸಿ ಮಡಿಗಳಲ್ಲಿ ಮುಂಚಿತವಾಗಿ ಸಸಿ ತಯಾರಿಸುವುದು, ಮಳೆ ಬಂದ ತಕ್ಷಣ ನಾಟಿ ನಡೆಸುವುದು ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ. ಕಾಂಟೂರ್ ಟ್ರೆಂಚ್ ನಿರ್ಮಾಣ, ಸಣ್ಣ ಚೌಕಾಕಾರದ ಮಡಿಗಳ ನಿರ್ಮಾಣ, ಪ್ರತಿ ಎಕರೆಗೆ 3 ರಿಂದ 4 ಕೆ.ಜಿ. ಮೈಕ್ರೋರೈಜಾ ಗೊಬ್ಬರವನ್ನು ಸಾವಯವ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಭೂಮಿಗೆ ನೀಡುವುದು ಹಾಗೂ ಪ್ಲಾಸ್ಟಿಕ್ ಮಲ್ಚಿಂಗ್ ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ನೀರಿನ ಬಳಕೆ ಕಡಿಮೆಯಾಗಿ ಬೆಳೆ ಉತ್ತಮವಾಗಿ ಬೆಳೆಯುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಈಗಾಗಲೇ ಬಿತ್ತನೆಯಾಗಿರುವ ಈರುಳ್ಳಿ, ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳಲ್ಲಿ ಕಳೆ ನಿಯಂತ್ರಣ, ಅಂತರ ಬೇಸಾಯ ಹಾಗೂ ದಟ್ಟವಾಗಿ ಬೆಳೆದಿರುವ ಸಸಿಗಳನ್ನು ವಿರಳಗೊಳಿಸುವುದು ಅಗತ್ಯವಾಗಿದೆ. ಹನಿ ನೀರಾವರಿ ಪದ್ಧತಿಯಲ್ಲಿ ಸಾಲು ಬಿಟ್ಟು ಸಾಲು ನೀರುಣಿಸುವುದರಿಂದ ನೀರಿನ ಉಳಿತಾಯ ಸಾಧ್ಯವಾಗುತ್ತದೆ. ಬರ ಮುಂದುವರಿದರೆ ಮೇಲುಗೊಬ್ಬರ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ತಜ್ಞರು ತಿಳಿಸಿದ್ದಾರೆ.

ಬೆಳೆಗಳಿಗೆ ಬರದ ಒತ್ತಡವನ್ನು ಕಡಿಮೆ ಮಾಡಲು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಪೋಟ್ಯಾಷಿಯಂ ನೈಟ್ರೇಟ್ ಬೆರೆಸಿ ಸಿಂಪಡಿಸಬಹುದು. ಪರ್ಯಾಯವಾಗಿ ಟ್ರೈಕಾಂಟಿನಾಲ್ (ಸಸ್ಯ ಪ್ರಚೋದಕ) ಅನ್ನು 0.5 ರಿಂದ 1 ಗ್ರಾಂ ಪ್ರಮಾಣದಲ್ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಒಮ್ಮೆ ಮಾತ್ರ ಸಿಂಪಡಿಸುವುದರಿಂದ ಗಿಡಗಳ ಬರ ಸಹಿಷ್ಣುತೆ ಹೆಚ್ಚುತ್ತದೆ ಎಂದು ಸಲಹೆ ನೀಡಲಾಗಿದೆ.

ದೀರ್ಘಕಾಲ ಬರದ ನಂತರ ಮಳೆ ಆರಂಭವಾದಲ್ಲಿ ಗಿಡಗಳ ಬೆಳವಣಿಗೆಯನ್ನು ಉತ್ತೇಜಿಸಲು ಪ್ರತಿ ಲೀಟರ್ ನೀರಿಗೆ 20 ಗ್ರಾಂ ಯೂರಿಯಾ ಅಥವಾ ಡಿಎಪಿ ಗೊಬ್ಬರವನ್ನು ಬೆರೆಸಿ ಸಿಂಪಡಿಸಬಹುದು. ಜೊತೆಗೆ ಮೆಗ್ನೀಸಿಯಂ ಹಾಗೂ ಜಿಂಕ್ನಂತಹ ಲಘು ಪೋಷಕಾಂಶಗಳನ್ನು 200 ಲೀಟರ್ ನೀರಿಗೆ 100 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸುವುದರಿಂದ ಗಿಡಗಳ ಬೆಳವಣಿಗೆ ಉತ್ತಮವಾಗುತ್ತದೆ. ಸೀ-ವೀಡ್ ಎಕ್ಸ್ಟ್ರಾಕ್ಟ್ ಅಥವಾ ಜೀವಾಮೃತ ಹಾಗೂ ಎರೆಜಲವನ್ನು ಕೂಡ ತೇವಾಂಶ ಇರುವ ಸಂದರ್ಭದಲ್ಲಿ ಬಳಸಬಹುದು ಎಂದು ಸೂಚಿಸಲಾಗಿದೆ.

ಹಣ್ಣಿನ ತೋಟಗಳಲ್ಲಿಯೂ ಬರ ನಿರ್ವಹಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ದಟ್ಟವಾಗಿ ಬೆಳೆದಿರುವ ಕೊಂಬೆಗಳನ್ನು ಕತ್ತರಿಸುವುದು, ನಿಯಮಿತ ಚಾಟಣಿ ಹಾಗೂ ಸವರುವಿಕೆ ನಡೆಸುವುದು, ಹೊಸದಾಗಿ ನಾಟಿ ಮಾಡಿದ ಗಿಡಗಳಿಗೆ ನೆರಳು ಒದಗಿಸುವುದು ಹಾಗೂ ದಾಳಿಂಬೆ, ಲಿಂಬೆ, ಬಾಳೆ ಹಾಗೂ ಮಾವಿನ ತೋಟಗಳಲ್ಲಿ ವೈಜ್ಞಾನಿಕ ನಿರ್ವಹಣೆ ಕೈಗೊಳ್ಳುವುದು ಅಗತ್ಯವಾಗಿದೆ.

ಹುರುಳಿ, ಅಲಸಂದಿ ಹಾಗೂ ಮಕುನಾ ಮೊದಲಾದ ಭೂ ಹೊದಿಕೆ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ತೇವಾಂಶವನ್ನು ಹೆಚ್ಚು ಕಾಲ ಉಳಿಸಿಕೊಳ್ಳಬಹುದು. ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಲ್ಲಿ ಪ್ಲಾಸ್ಟಿಕ್ ಅಥವಾ ಇತರೆ ಹೊದಿಕೆಗಳನ್ನು ಬಳಸಿ ತೇವಾಂಶ ಕಾಪಾಡಿಕೊಳ್ಳುವುದು, ಸಾವಯವ ಗೊಬ್ಬರದೊಂದಿಗೆ ಮೈಕ್ರೋರೈಜಾ ಗೊಬ್ಬರ ಬಳಸುವುದು ಹಾಗೂ ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಪ್ರತಿ ಗಿಡಕ್ಕೆ 5 ಕೆ.ಜಿ. ಬೇವಿನ ಹಿಂಡಿ ಅಥವಾ ಇತರೆ ಸಾವಯವ ಹಿಂಡಿಗಳನ್ನು ನೀಡುವುದು ಉತ್ತಮ ಫಲಿತಾಂಶ ನೀಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಅಗತ್ಯವಿದ್ದಲ್ಲಿ ತಜ್ಞರ ಸಲಹೆಯ ಮೇರೆಗೆ ಹೈಡ್ರೋಜೆಲ್ ಅಥವಾ ಬಯೋಚಾರನ್ನು ಕೆಂಪು ಮಸಾರಿ ಮಣ್ಣಿನಲ್ಲಿ ಬಳಸಬಹುದಾಗಿದೆ. ಮಣ್ಣಿನ ತೇವಾಂಶವನ್ನು ಕಾಪಾಡುವುದು, ನೀರಿನ ಸಮರ್ಪಕ ಬಳಕೆ ಹಾಗೂ ಪೋಷಕಾಂಶ ನಿರ್ವಹಣೆಗೆ ಆದ್ಯತೆ ನೀಡುವುದರಿಂದ ಬರದ ಅವಧಿಯಲ್ಲೂ ಬೆಳೆಗಳನ್ನು ಸಂರಕ್ಷಿಸಿ ಉತ್ತಮ ಉತ್ಪಾದನೆ ಪಡೆಯಲು ಸಾಧ್ಯವಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈತರು ಈ ವೈಜ್ಞಾನಿಕ ಶಿಫಾರಸ್ಸುಗಳನ್ನು ಸಮಯೋಚಿತವಾಗಿ ಅನುಸರಿಸಿ ಸಂಭವನೀಯ ನಷ್ಟವನ್ನು ತಪ್ಪಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande