
ಗದಗ, 09 ಜುಲೈ (ಹಿ.ಸ.)
ಆ್ಯಂಕರ್: ಹಲವು ವರ್ಷಗಳಿಂದ ಯಾವುದೇ ವ್ಯವಹಾರ ಅಥವಾ ಉದ್ದೇಶಿತ ಚಟುವಟಿಕೆಗಳನ್ನು ನಡೆಸದೇ ಕಾರ್ಯನಿರ್ವಹಣೆ ಸಂಪೂರ್ಣ ಸ್ಥಗಿತಗೊಂಡಿರುವ ಗದಗ ಜಿಲ್ಲೆಯ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ 20 ಸಹಕಾರ ಸಂಘಗಳ ವಿರುದ್ಧ ಸಹಕಾರ ಇಲಾಖೆ ಸಮಾಪನಾ ಕ್ರಮ ಕೈಗೊಂಡಿದ್ದು, ಸಂಘಗಳಿಗೆ ಸಂಬಂಧಿಸಿದ ಯಾವುದೇ ಬಾಕಿ-ಬಾಬ್ತುಗಳು ಅಥವಾ ಹಕ್ಕು-ಹಣಕಾಸು ವ್ಯವಹಾರಗಳಿದ್ದಲ್ಲಿ ಸಾರ್ವಜನಿಕರು ಮತ್ತು ಸಂಬಂಧಪಟ್ಟವರು ಏಳು ದಿನಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರಕಟಣೆ ಹೊರಡಿಸಿದೆ.
ಸಹಕಾರ ಸಂಘಗಳ ಉಪನಿಬಂಧಕರು, ಕಾರ್ಯನಿರ್ವಹಣೆ ನಿಲ್ಲಿಸಿರುವ ಈ ಸಹಕಾರ ಸಂಘಗಳನ್ನು ನಿಯಮಾನುಸಾರ ಸಮಾಪನೆಗೊಳಿಸುವ ಆದೇಶ ಹೊರಡಿಸಿದ್ದು, ಸಮಾಪನಾ ಪ್ರಕ್ರಿಯೆ ನಡೆಸಲು ಸಮಾಪನಾಧಿಕಾರಿಯನ್ನು ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘಗಳಿಗೆ ಸಂಬಂಧಿಸಿದ ಯಾವುದೇ ಆರ್ಥಿಕ ವ್ಯವಹಾರ, ಸಾಲ, ಠೇವಣಿ, ಆಸ್ತಿ ಅಥವಾ ಇತರೆ ಹಕ್ಕುಗಳಿರುವವರು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯಲ್ಲಿ ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಸಹಕಾರ ಇಲಾಖೆಯ ಮಾಹಿತಿ ಪ್ರಕಾರ, ಸಮಾಪನೆಗೊಂಡಿರುವ ಬಹುತೇಕ ಸಂಘಗಳು ತಮ್ಮ ನೋಂದಾಯಿತ ವಿಳಾಸಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ಸಂಘಗಳ ಆಡಳಿತ ಮಂಡಳಿ ಸದಸ್ಯರು, ಅಧ್ಯಕ್ಷರು ಅಥವಾ ಮುಖ್ಯ ಕಾರ್ಯನಿರ್ವಾಹಕರು (ಕಾರ್ಯದರ್ಶಿಗಳು) ಯಾರು ಎಂಬ ಮಾಹಿತಿಯೂ ಲಭ್ಯವಿಲ್ಲ. ಹಲವು ವರ್ಷಗಳಿಂದ ಸಭೆ, ಲೆಕ್ಕಪತ್ರ, ವಾರ್ಷಿಕ ವರದಿ ಹಾಗೂ ವ್ಯವಹಾರಗಳು ನಡೆಯದೇ ಇರುವ ಕಾರಣ ಕಾನೂನುಬದ್ಧ ಸಮಾಪನಾ ಪ್ರಕ್ರಿಯೆ ಆರಂಭಿಸಲಾಗಿದೆ.
ಯಾವುದೇ ವ್ಯಕ್ತಿಗಳಿಗೆ ಸಂಘಗಳಿಂದ ಹಣ ಬರಬೇಕಿದ್ದರೆ ಅಥವಾ ಸಂಘಕ್ಕೆ ಕೊಡಬೇಕಾದ ಹಣ, ದಾಖಲೆಗಳು, ಆಸ್ತಿ, ಬಾಧ್ಯತೆಗಳು ಅಥವಾ ಇತರೆ ವ್ಯವಹಾರಗಳಿದ್ದರೆ ಅವುಗಳ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ ಏಳು ದಿನಗಳೊಳಗೆ ಶಿರಹಟ್ಟಿ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಗದಗ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಅಥವಾ ಹಕ್ಕು ದಾವೆ ಸಲ್ಲಿಕೆಯಾಗದಿದ್ದರೆ, ಸಂಬಂಧಿತ ಸಹಕಾರ ಸಂಘಗಳಿಗೆ ಯಾವುದೇ ಬಾಕಿ ಅಥವಾ ಹಕ್ಕುಗಳಿಲ್ಲವೆಂದು ಪರಿಗಣಿಸಿ ಅವುಗಳ ಲೆಕ್ಕಪತ್ರ ಹಾಗೂ ಆಡಳಿತ ದಾಖಲೆಗಳನ್ನು ನಿಯಮಾನುಸಾರ ಶೂನ್ಯಗೊಳಿಸಿ, ಅಂತಿಮವಾಗಿ ಸಂಘಗಳ ನೋಂದಣಿಯನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುತ್ತದೆ. ನಂತರ ಸಲ್ಲಿಸಲಾಗುವ ಯಾವುದೇ ಆಕ್ಷೇಪಣೆ ಅಥವಾ ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮಾಪನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಮಾಪನೆ ಪ್ರಕ್ರಿಯೆಗೆ ಒಳಪಟ್ಟಿರುವ ಸಂಘಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಖಾದಿ ಗ್ರಾಮೋದ್ಯೋಗ ಸಹಕಾರ ಸಂಘಗಳು, ಗ್ರಾಹಕರ ಸಹಕಾರ ಸಂಘಗಳು, ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು, ವಿದ್ಯುತ್ ಮಗ್ಗ ನೇಕಾರರ ಹಾಗೂ ಜವಳಿ ಉತ್ಪಾದಕರ ಮಹಿಳಾ ಸಹಕಾರ ಸಂಘಗಳು, ಕೈಮಗ್ಗ ನೇಕಾರರ ಸಂಘಗಳು, ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳು, ಕೋಳಿ ಸಾಕಾಣಿಕೆದಾರರ ಸಹಕಾರ ಸಂಘಗಳು, ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರ ಸಂಘಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘಗಳು ಸೇರಿವೆ.
ಲಕ್ಷ್ಮೇಶ್ವರ ತಾಲೂಕಿನ ಶ್ರೀ ಸೋಮೇಶ್ವರ ಶೇಂಗಾ ಹಾಗೂ ಕುಸಬಿ ರೂಪಾಂತರಿಸುವ ಸಂಸ್ಕರಣಾ ಸಹಕಾರ ಸಂಘ, ಆದರಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಶಿಗ್ಲಿಯ ಶ್ರೀ ಗಂಗಾಧರ ಮರ್ಚಂಟ್ಸ್ ಕೋ-ಆಫ್ ಕ್ರೆಡಿಟ್ ಸೊಸೈಟಿ, ಉಮಾ ವಿದ್ಯಾಲಯ ಹಾಗೂ ಆರ್ಟ್ಸ್ ಕಾಲೇಜು ನೌಕರರ ಪತ್ತಿನ ಸಹಕಾರ ಸಂಘಗಳು, ಅರುಣೋದಯ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ, ಸಮರ್ಥ ಗ್ರಾಹಕರ ಸಹಕಾರ ಸಂಘ, ಬಾಲೇಹೊಸೂರಿನ ಶ್ರೀ ಬೀರೇಶ್ವರ ಕುರಿ ಸಾಕಾಣಿಕೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ, ಶಿಗ್ಲಿಯ ಮಹಿಳಾ ಜವಳಿ ಉತ್ಪಾದಕರ ಸಹಕಾರ ಸಂಘ, ಕೈಮಗ್ಗ ನೇಕಾರರ ಸಹಕಾರ ಸಂಘ, ಯಳವತ್ತಿಯ ಪ್ರಕೃತಿ ಕ್ರೆಡಿಟ್ ಕೋ-ಆಫ್ ಸೊಸೈಟಿ, ಲಕ್ಷ್ಮೇಶ್ವರ ಹಾಗೂ ಯತ್ನಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಗೊಜನೂರಿನ ಕೋಳಿ ಸಾಕಾಣಿಕೆದಾರರ ಸಹಕಾರ ಸಂಘಗಳು ಪಟ್ಟಿಯಲ್ಲಿವೆ.
ಅದೇ ರೀತಿ ಶಿರಹಟ್ಟಿ ತಾಲೂಕಿನ ಕುರಿ ಸಂಗೋಪನಾ ಹಾಗೂ ಉಣ್ಣೆ ಜೌದ್ಯೋಗಿಕ ಸಹಕಾರ ಸಂಘ, ಗ್ರಾಮೋದ್ಯೋಗ ಕಸಬುದಾರರ ವಿವಿಧೋದ್ದೇಶಗಳ ಸಹಕಾರ ಸಂಘ, ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ, ಕುಸಲಾಪೂರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಶಿರಹಟ್ಟಿ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ಹಾಗೂ ಮಜ್ಜೂರಿನ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಹಲವು ಸಂಘಗಳು ಸಮಾಪನಾ ಪ್ರಕ್ರಿಯೆಗೆ ಒಳಪಟ್ಟಿವೆ.
ಸಹಕಾರ ಸಂಘಗಳ ಸದಸ್ಯರು, ಮಾಜಿ ಪದಾಧಿಕಾರಿಗಳು, ಸಾಲದಾರರು, ಠೇವಣಿದಾರರು ಹಾಗೂ ಸಾರ್ವಜನಿಕರು ತಮ್ಮ ಹಕ್ಕುಗಳಿಗೆ ಸಂಬಂಧಿಸಿದ ದಾಖಲೆಗಳಿದ್ದಲ್ಲಿ ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಆಕ್ಷೇಪಣೆ ಸಲ್ಲಿಸುವಂತೆ ಸಹಕಾರ ಇಲಾಖೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP