
ಬೆಂಗಳೂರು, 09 ಜುಲೈ (ಹಿ.ಸ.)
ಆ್ಯಂಕರ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟುಹೋಗಿರುವ ವಾಹನಗಳ ವಿರುದ್ಧ ಅದರ ವ್ಯಾಪ್ತಿಯ ಐದು ನಗರ ಪಾಲಿಕೆಗಳು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಿವೆ.
ಜಿಬಿಎ ಕಾಯ್ದೆ-2024ರ ಸೆಕ್ಷನ್ 324ರ ಅನ್ವಯ ಜುಲೈ 10ರಿಂದ ಕಾರ್ಯಾಚರಣೆ ಆರಂಭವಾಗಲಿದ್ದು, ರಸ್ತೆ, ಸಾರ್ವಜನಿಕ ಪ್ರದೇಶ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಲವು ದಿನಗಳಿಂದ ನಿಲ್ಲಿಸಿರುವ ಅನಾಥ ವಾಹನಗಳನ್ನು ಗುರುತಿಸಿ ತೆರವುಗೊಳಿಸಲಾಗುತ್ತದೆ.
ಈ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದ್ದು, ಮೊದಲ ಹಂತದಲ್ಲಿ ವಾಹನಗಳ ಮಾಲೀಕರಿಗೆ ವಾಹನದ ಮೇಲೆ 7 ದಿನಗಳ ನೋಟಿಸ್ ಅಂಟಿಸಲಾಗುತ್ತದೆ. ನಿಗದಿತ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದರೆ, ಟೋಯಿಂಗ್ ಮೂಲಕ ವಾಹನವನ್ನು ಸ್ಥಳಾಂತರಿಸಲಾಗುತ್ತದೆ. ಬಳಿಕವೂ ಮಾಲೀಕರು ವಾಹನವನ್ನು ಪಡೆದುಕೊಳ್ಳದಿದ್ದರೆ, ನಿಯಮಾನುಸಾರ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದುತಿಳಿಸಿದರು.
ಸಾರ್ವಜನಿಕರು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ಮಾಹಿತಿ ಸಂಬಂಧಿತ ಅಧಿಕಾರಿಗಳಿಗೆ ನೀಡುವಂತೆ ಪಾಲಿಕೆ ಮನವಿ ಮಾಡಿದೆ. ಇದರಿಂದ ಸಂಚಾರ ಸುಗಮವಾಗುವುದರ ಜೊತೆಗೆ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡಲು ನೆರವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕ ಪ್ರಕಟಣೆಯಲ್ಲಿ ಆದೇಶ ಹೊರಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / SNEHA K