
ವಿಜಯಪುರ, 08 ಜುಲೈ (ಹಿ.ಸ.)
ಆ್ಯಂಕರ್ : ಬೆಂಗಳೂರಿನ ಸರ್ಕಾರಿ ಸಾಯಿ ಕ್ಯಾಂಪಸ್ನಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್, ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ 14ನೇ ರಾಜ್ಯ ಶೂಟಿಂಗ್ ಕ್ರೀಡಾ ಸ್ಪರ್ಧೆ ಹಾಗೂ ಚಾಂಪಿಯನ್ ಶಿಪ್ ನಲ್ಲಿ ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.
ಮಾಸ್ಟರ್ಸ್ ವಿಭಾಗದ 10 ಮೀಟರ್ ಗ್ರೂಪ್ ಇವೆಂಟ್ (ಓಪನ್ ಸೈಟ್) ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲಾ ರೈಫಲ್ ಅಸೋಸಿಯೇಷನ್ ಪರವಾಗಿ ಭಾಗವಹಿಸಿದ್ದ ಗೌರವ ದರ್ಬಾರ ಹಾಗೂ ಪ್ರೇಮಾನಂದ ನಾಗರೇಶಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಮೊದಲ ಬಾರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಈ ತಂಡದ ಸಾಧನೆ ಜಿಲ್ಲೆಯ ಶೂಟಿಂಗ್ ಕ್ರೀಡೆಗೆ ಹೊಸ ಉತ್ತೇಜನ ನೀಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅನುಭವಿ ಶೂಟರ್ಗಳ ನಡುವೆ ನಡೆದ ತೀವ್ರ ಪೈಪೋಟಿಯಲ್ಲೂ ವಿಜಯಪುರದ ಕ್ರೀಡಾಪಟುಗಳು ಆತ್ಮವಿಶ್ವಾಸದಿಂದ ಸ್ಪರ್ಧಿಸಿ ಬೆಳ್ಳಿ ಪದಕತಮ್ಮದಾಗಿಸಿಕೊಂಡಿದ್ದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಇದು ಮಹತ್ವದ ಮೈಲಿಗಲ್ಲಾಗಿದೆ. ಈ ಸಾಧನೆಯು ಜಿಲ್ಲೆಯ ಯುವ ಕ್ರೀಡಾಪಟುಗಳಲ್ಲಿ ರೈಫಲ್ ಶೂಟಿಂಗ್ ಕ್ರೀಡೆಯ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸುವಂತಾಗಿದೆ.
ಈ ಕುರಿತು ಮಾತನಾಡಿದ ವಿಜಯಪುರ ಜಿಲ್ಲಾ ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ ಕಾರಜೋಳ, ರೈಫಲ್ ಶೂಟಿಂಗ್ ಕ್ರೀಡೆಯ ಬಗ್ಗೆ ಯುವಜನರಲ್ಲಿ ದಿನದಿಂದ ದಿನಕ್ಕೆ ಆಸಕ್ತಿ ಹೆಚ್ಚುತ್ತಿದೆ. ವಿಜಯಪುರ ಜಿಲ್ಲೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಪ್ರತಿಭಾವಂತ ಶೂಟರ್ಗಳನ್ನು ರೂಪಿಸುವ ಗುರಿಯೊಂದಿಗೆ ಜಿಲ್ಲಾ ರೈಫಲ್ ಅಸೋಸಿಯೇಷನ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಮೊದಲ ಪ್ರಯತ್ನದಲ್ಲೇ ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದು ಜಿಲ್ಲೆಯ ಹೆಮ್ಮೆ ಹೆಚ್ಚಿಸಿರುವ ಗೌರವ ದರ್ಬಾರ ಹಾಗೂ ಪ್ರೇಮಾನಂದ ನಾಗರೇಶಿ ಅವರ ಸಾಧನೆ ಅಭಿನಂದನೀಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಪಟುಗಳಿಗೆ ತರಬೇತಿ ಹಾಗೂ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ ಗೌರವ ದರ್ಬಾರ ಹಾಗೂ ಪ್ರೇಮಾನಂದ ನಾಗರೇಶಿ ಅವರನ್ನು ವಿಜಯಪುರ ಜಿಲ್ಲಾ ರೈಫಲ್ ಅಸೋಸಿಯೇಷನ್ ವತಿಯಿಂದ ವಿಜಯಪುರದ ರೋಟರಿ ಕ್ಲಬ್ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಪದಕ ವಿಜೇತರ ಸಾಧನೆಯನ್ನು ಶ್ಲಾಘಿಸಿದ ಗಣ್ಯರು, ಮುಂದಿನ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲೂ ಜಿಲ್ಲೆಯ ಕ್ರೀಡಾಪಟುಗಳು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸಮಾರಂಭದಲ್ಲಿ ಜಿಲ್ಲಾ ರೈಫಲ್ ಅಸೋಸಿಯೇಷನ್ ಉಪಾಧ್ಯಕ್ಷ ಶಿವಕುಮಾರ ಶಾರದಳ್ಳಿ, ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು, ಶೂಟಿಂಗ್ ತರಬೇತುದಾರರು ಹಾಗೂ ಸದಸ್ಯರು ಉಪಸ್ಥಿತರಿದ್ದು, ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ವಿಜಯಪುರದಲ್ಲಿ ರೈಫಲ್ ಶೂಟಿಂಗ್ ಕ್ರೀಡೆಯ ಬೆಳವಣಿಗೆಗೆ ಇಂತಹ ಸಾಧನೆಗಳು ಹೊಸ ಚೈತನ್ಯ ನೀಡಲಿದ್ದು, ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande