ಗದಗದಲ್ಲಿ ಸಾರಿಗೆ ಬಸ್ ಬ್ರೇಕ್ ಫೇಲ್: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ
ಗದಗ, 08 ಜುಲೈ (ಹಿ.ಸ.) ಆ್ಯಂಕರ್:- ಗದಗ ನಗರದ ಹೊಸ ಬಸ್ ನಿಲ್ದಾಣದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ನ ಬ್ರೇಕ್ ಏಕಾಏಕಿ ವಿಫಲಗೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಬಸ್ ಹಿಂಬದಿಗೆ ಚಲಿಸಿ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್
ಫೋಟೋ


ಗದಗ, 08 ಜುಲೈ (ಹಿ.ಸ.)

ಆ್ಯಂಕರ್:- ಗದಗ ನಗರದ ಹೊಸ ಬಸ್ ನಿಲ್ದಾಣದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಬಸ್ನ ಬ್ರೇಕ್ ಏಕಾಏಕಿ ವಿಫಲಗೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಬಸ್ ಹಿಂಬದಿಗೆ ಚಲಿಸಿ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಅಪಾಯಕ್ಕೆ ಸಿಲುಕಿದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೇ ಭಾರಿ ದುರಂತ ತಪ್ಪಿದೆ. ಸ್ಥಳದಲ್ಲಿದ್ದ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬಸ್ ಅಡಿಯಲ್ಲಿ ಸಿಲುಕಿದ್ದ ಬೈಕ್ ಸವಾರನನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಲಾಯಿತು.

ಹಳೆಯ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹೊಸ ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿ ತಲುಪುತ್ತಿದ್ದಂತೆ ಚಾಲಕ ಬಸ್ನ್ನು ನಿಯಂತ್ರಿಸಲು ಬ್ರೇಕ್ ಹಾಕಿದ್ದಾರೆ. ಇದೇ ವೇಳೆ ಬಸ್ನ ಬ್ರೇಕ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ಬಸ್ ನಿಯಂತ್ರಣ ತಪ್ಪಿ ಹಿಂಬದಿಗೆ ಚಲಿಸಲು ಆರಂಭಿಸಿದೆ.

ಬಸ್ ವೇಗವಾಗಿ ಹಿಂದಕ್ಕೆ ಚಲಿಸುತ್ತಿರುವುದನ್ನು ಗಮನಿಸಿದ ಚಾಲಕ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದೇ ವೇಳೆ ಬಸ್ ಹಿಂಭಾಗದಲ್ಲಿ ಎರಡು ಬೈಕ್ಗಳು ನಿಂತಿದ್ದವು. ಮೊದಲ ಬೈಕ್ನಲ್ಲಿದ್ದ ಇಬ್ಬರು ಯುವಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕ್ಷಣಾರ್ಧದಲ್ಲಿ ಬೈಕ್ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾದರು. ಆದರೆ ಮತ್ತೊಂದು ಬೈಕ್ನ ಸವಾರ ಬಸ್ ಹಿಂಬದಿಗೆ ಚಲಿಸುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಬೈಕ್ ಸಮೇತ ಬಸ್ ಅಡಿಯಲ್ಲಿ ಸಿಲುಕಿಕೊಂಡರು.

ಈ ದೃಶ್ಯ ಕಂಡ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಕೆಲವರು ಬಸ್ ಚಾಲಕನಿಗೆ ಸೂಚನೆ ನೀಡಿದರೆ, ಇನ್ನೂ ಕೆಲವರು ಬಸ್ ಅಡಿಯಲ್ಲಿ ಸಿಲುಕಿದ್ದ ಬೈಕ್ ಸವಾರನನ್ನು ಹೊರತೆಗೆದರು. ಸಾರ್ವಜನಿಕರ ಸಮಯೋಚಿತ ಕಾರ್ಯಾಚರಣೆಯಿಂದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ದೊಡ್ಡ ಅನಾಹುತ ತಪ್ಪಿದಂತಾಯಿತು.

ಘಟನೆಯಿಂದ ಕೆಲಕಾಲ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಸ್ ಹಿಂಬದಿಗೆ ಚಲಿಸುತ್ತಿರುವುದನ್ನು ಕಂಡ ಪ್ರಯಾಣಿಕರು ಹಾಗೂ ಸಾರ್ವಜನಿಕರು ಭಯಭೀತರಾಗಿ ಸುರಕ್ಷಿತ ಸ್ಥಳಗಳಿಗೆ ಓಡಿದರು. ಘಟನಾ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಸಾರಿಗೆ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಳೆಯ ಹಾಗೂ ತಾಂತ್ರಿಕ ದೋಷಗಳಿರುವ ಡಕೋಟಾ ಬಸ್ಗಳನ್ನು ರಸ್ತೆಗಿಳಿಸುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು. ದಿನನಿತ್ಯ ಸಾವಿರಾರು ಪ್ರಯಾಣಿಕರನ್ನು ಸಾಗಿಸುವ ಬಸ್ಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಬಸ್ಗಳನ್ನು ರಸ್ತೆಗಿಳಿಸುವ ಮುನ್ನ ಸಂಪೂರ್ಣ ತಾಂತ್ರಿಕ ತಪಾಸಣೆ ನಡೆಸಬೇಕು. ವಿಶೇಷವಾಗಿ ಬ್ರೇಕ್, ಸ್ಟೀರಿಂಗ್ ಹಾಗೂ ಇತರ ಸುರಕ್ಷತಾ ವ್ಯವಸ್ಥೆಗಳ ಪರಿಶೀಲನೆ ಕಡ್ಡಾಯವಾಗಬೇಕು. ಹಳೆಯ ಹಾಗೂ ಅಪಾಯಕಾರಿಯಾದ ಬಸ್ಗಳನ್ನು ಸೇವೆಯಿಂದ ಹಿಂಪಡೆದು ಹೊಸ ಬಸ್ಗಳನ್ನು ಕಾರ್ಯಾಚರಣೆಗೆ ತರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗದಗ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ಚಾಲಕ ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಬಸ್ನ ಬ್ರೇಕ್ ವೈಫಲ್ಯಕ್ಕೆ ನಿಖರ ಕಾರಣವೇನು ಎಂಬುದನ್ನು ತಾಂತ್ರಿಕ ಪರಿಶೀಲನೆಯ ನಂತರವೇ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಹೊಸ ಬಸ್ ನಿಲ್ದಾಣದಂತಹ ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಸಾರಿಗೆ ಸಂಸ್ಥೆಯ ವಾಹನಗಳ ಸುರಕ್ಷತೆ ಮತ್ತು ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಸಾರಿಗೆ ಸಂಸ್ಥೆ ತಕ್ಷಣ ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಹಳೆಯ ಬಸ್ಗಳ ತಾಂತ್ರಿಕ ಸ್ಥಿತಿಯನ್ನು ಮರುಪರಿಶೀಲಿಸಿ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande