ಪ್ರತ್ಯಕ್ಷ ದೇವರೇ ವಿಶೇಷ ಚೇತನ ಮಕ್ಕಳು: ಶ್ರೀದೇವಿ ಎಸ್.ಎನ್.
ಗದಗ, 08 ಜುಲೈ (ಹಿ.ಸ.) ಆ್ಯಂಕರ್:- ಸಮಾಜದಲ್ಲಿ ವಿಶೇಷ ಚೇತನ ಮಕ್ಕಳನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದೇ ಮುಖ್ಯ. ವಿಶೇಷ ಚೇತನ ಮಕ್ಕಳು ಪ್ರತ್ಯಕ್ಷ ದೇವರ ಸ್ವರೂಪಿಗಳಾಗಿದ್ದು, ಅವರಲ
ಫೋಟೋ


ಗದಗ, 08 ಜುಲೈ (ಹಿ.ಸ.)

ಆ್ಯಂಕರ್:- ಸಮಾಜದಲ್ಲಿ ವಿಶೇಷ ಚೇತನ ಮಕ್ಕಳನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದೇ ಮುಖ್ಯ. ವಿಶೇಷ ಚೇತನ ಮಕ್ಕಳು ಪ್ರತ್ಯಕ್ಷ ದೇವರ ಸ್ವರೂಪಿಗಳಾಗಿದ್ದು, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಗದಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀಮತಿ ಶ್ರೀದೇವಿ ಎಸ್.ಎನ್. ಹೇಳಿದರು.

ನಗರದ ವಿಶ್ವ ಕಲ್ಯಾಣ (ರಿ.) ಗದಗ ಸಂಸ್ಥೆಯ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ, ತರಬೇತಿ, ಪುನರ್ವಸತಿ ಹಾಗೂ ವಿವಿಧ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯುವಂತೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಇಲಾಖೆ ಬದ್ಧವಾಗಿದೆ. ವಿಶೇಷ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಇಲಾಖೆ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ವಿಶೇಷ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೊರತರುವ ಕೆಲಸವನ್ನು ವಿಶ್ವ ಕಲ್ಯಾಣ ಸಂಸ್ಥೆ ನಿಸ್ವಾರ್ಥ ಸೇವಾ ಮನೋಭಾವದಿಂದ ಮಾಡುತ್ತಿದೆ. ಇಂತಹ ಸಂಸ್ಥೆಗಳ ಕಾರ್ಯಕ್ಕೆ ಸಮಾಜದ ಎಲ್ಲ ವರ್ಗದ ಜನರು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ಈಶ್ವರಯ್ಯ ಹಿರೇಮಠ, ಅಶೋಕ ರಡ್ಡೇರ ಹಾಗೂ ಶಂಕರಗೌಡ ಪಾಟೀಲ ಮಾತನಾಡಿ, ವಿಶೇಷ ಚೇತನರಲ್ಲಿ ಅಸಾಧಾರಣ ಪ್ರತಿಭೆ ಮತ್ತು ಶಕ್ತಿ ಅಡಗಿರುತ್ತದೆ. ಅವರಿಗೆ ವೈಜ್ಞಾನಿಕ ಶಿಕ್ಷಣ, ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ದೊರೆತರೆ ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಮಕ್ಕಳ ಭವಿಷ್ಯ ರೂಪಿಸುವ ಸೇವೆ ದೇವರು ಮೆಚ್ಚುವಂತಹ ಪುಣ್ಯದ ಕಾರ್ಯವಾಗಿದ್ದು, ಈ ಸೇವಾ ಚಟುವಟಿಕೆಗಳಿಗೆ ಸಮಾಜದ ಎಲ್ಲರೂ ಬೆಂಬಲ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಎಸ್.ಎನ್. ಅವರನ್ನು ಶಾಲೆಯ ವಿಶೇಷ ಮಕ್ಕಳು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿದರು. ಶ್ಯಾಲು ಹೊದಿಸಿ, ಮುತ್ತಿನ ಹಾರ ಹಾಕಿ, ಫಲ-ಪುಷ್ಪ ನೀಡಿ ಗೌರವ ಸಲ್ಲಿಸಲಾಯಿತು. ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಮತ್ತಷ್ಟು ವಿಸ್ತರಿಸಲಿ ಹಾಗೂ ಉನ್ನತ ಜವಾಬ್ದಾರಿಗಳನ್ನು ಅಲಂಕರಿಸುವಂತಾಗಲಿ ಎಂದು ಶುಭ ಹಾರೈಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಜುನಾಥ ಹದ್ದಣ್ಣವರ ಮಾತನಾಡಿ, ಸಂಸ್ಥೆ ನಡೆದು ಬಂದ ಹಾದಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಕೈಗೊಂಡಿರುವ ಸೇವಾ ಕಾರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಜಾರಿಗೊಳಿಸಲಿರುವ ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸಿದರು. ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ, ಪುನರ್ವಸತಿ, ಉದ್ಯೋಗಮುಖಿ ತರಬೇತಿ ಹಾಗೂ ಸ್ವಾವಲಂಬಿ ಬದುಕು ರೂಪಿಸುವ ಗುರಿಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಗನ ರಡ್ಡೇರ, ಬಸವರಾಜ, ಪ್ರಭಾ ರಡ್ಡೇರ, ನಜುಂಡ, ಶಂಕ್ರಮ್ಮ, ಶಾಂತಮ್ಮ, ವಿಶೇಷ ಅಗತ್ಯವುಳ್ಳ ಮಕ್ಕಳು, ಅವರ ಪಾಲಕರು, ಶಿಕ್ಷಕರು, ಸಿಬ್ಬಂದಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande