
ವಿಜಯಪುರ, 08 ಜುಲೈ (ಹಿ.ಸ.)
ಆ್ಯಂಕರ್ : 957.09 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಹೆದ್ದಾರಿ-548ಬಿ (ಎನ್ಎಚ್-548ಬಿ) ಕಾಮಗಾರಿ 2027ರ ಮಾರ್ಚ್ ವೇಳೆಗೆ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಈ ಹೆದ್ದಾರಿ ಪೂರ್ಣಗೊಂಡ ಬಳಿಕ ವಿಜಯಪುರ ನಗರಕ್ಕೆ ಏಳನೇ ರಾಷ್ಟ್ರೀಯ ಹೆದ್ದಾರಿಯ ಸೇರ್ಪಡೆಯಾಗಿ ಜಿಲ್ಲೆಯ ರಸ್ತೆ ಸಂಪರ್ಕ ಮತ್ತಷ್ಟು ಬಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ವಿವಿಧ ಭಾಗಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ಬಳಿಕ ಮಾತನಾಡಿದ ಸಂಸದರು, ಮಹಾರಾಷ್ಟ್ರದ ಮುರುಮ್ನಿಂದ ವಿಜಯಪುರ ನಗರದ ಸುಭಾಷ್ ಚಂದ್ರ ಬೋಸ್ ವೃತ್ತದವರೆಗೆ ನಿರ್ಮಾಣಗೊಳ್ಳುತ್ತಿರುವ ಈ ಹೆದ್ದಾರಿಯ ಕಾಮಗಾರಿ ಈಗಾಗಲೇ ಶೇ.65ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಮೂಲ ವೇಳಾಪಟ್ಟಿಯಂತೆ ಕಾಮಗಾರಿ 2025ರ ಜನವರಿ 16ರಂದು ಆರಂಭಗೊಂಡು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ವಿವಿಧ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದ್ದು, ಇದೀಗ 2027ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸುಮಾರು 102.303 ಕಿಲೋಮೀಟರ್ ಉದ್ದದ ಈ ರಾಷ್ಟ್ರೀಯ ಹೆದ್ದಾರಿಗೆ ಒಟ್ಟು 957.09 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಮಹಾರಾಷ್ಟ್ರದ ಮುರುಮ್ನಿಂದ ಆರಂಭವಾಗಿ ಕರಜಗಿ, ಮಾಶ್ಯಾಳ, ಇಂಡಿ, ರೂಗಿ, ಅಥರ್ಗಾ, ನಾಗಠಾಣ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಸಾಗುವ ಈ ಹೆದ್ದಾರಿಯಲ್ಲಿ ಏಳು ಬೈಪಾಸ್ಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವುದರೊಂದಿಗೆ ವಾಹನಗಳ ಸುರಕ್ಷಿತ ಮತ್ತು ವೇಗದ ಸಂಚಾರಕ್ಕೆ ಅನುಕೂಲವಾಗಲಿದೆ.
ಯೋಜನೆಯ ಭಾಗವಾಗಿ ನಾಲ್ಕು ಬೃಹತ್ ಸೇತುವೆಗಳು ಹಾಗೂ ಒಂದು ರೈಲ್ವೆ ಮೇಲ್ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಹೆದ್ದಾರಿಯ ಗುಣಮಟ್ಟ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ನಡುವಿನ ರಸ್ತೆ ಸಂಪರ್ಕ ಇನ್ನಷ್ಟು ಸುಗಮವಾಗಲಿದ್ದು, ವ್ಯಾಪಾರ, ಕೈಗಾರಿಕೆ, ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎಂದು ಸಂಸದರು ಹೇಳಿದರು.
ವಿಜಯಪುರ ನಗರಕ್ಕೆ ಈಗಾಗಲೇ ಸಂಪರ್ಕ ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳ ಜಾಲಕ್ಕೆ ಈ ಹೊಸ ಎನ್ಎಚ್-548ಬಿ ಸೇರ್ಪಡೆಯಾಗುವುದರಿಂದ ನಗರವು ಪ್ರಮುಖ ಸಾರಿಗೆ ಕೇಂದ್ರವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಇದರಿಂದ ಜಿಲ್ಲೆಯ ಆರ್ಥಿಕ ಬೆಳವಣಿಗೆಗೂ ಹೊಸ ಚೈತನ್ಯ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
ಪರಿಶೀಲನಾ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ವಿಜಯ ಪಾಟೀಲ, ಯೋಜನಾ ವ್ಯವಸ್ಥಾಪಕ ಮಾರುತಿರಾವ್ ಶಿಂದೆ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿವೇಕ ಮಠ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande