
ಬಾಗಲಕೋಟೆ, 08 ಜುಲೈ (ಹಿ.ಸ.)
ಆ್ಯಂಕರ್ : ನಿನ್ನೆಯ ದಿನ ರೈತರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಂಡ ಬಾಗಲಕೋಟೆ ಜಿಲ್ಲೆಯ ತೇರದಾಳ ಶಾಸಕ ಸಿದ್ದು ಸವದಿ ಅವರು ತಡರಾತ್ರಿಯೇ ಕುಲಹಳ್ಳಿ–ಹುನ್ನೂರ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಮೂಲಕ ರೈತರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸಿದರು. ರೈತರ ಮನವಿಗೆ ತಕ್ಷಣ ಸ್ಪಂದಿಸಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಶಾಸಕ ಸವದಿ, ರೈತರ ಸಮ್ಮುಖದಲ್ಲೇ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ ಹಾಗೂ ಬೆಳೆಗಳಿಗೆ ನೀರಿನ ಅಭಾವದಿಂದ ಸಂಕಷ್ಟ ಅನುಭವಿಸುತ್ತಿದ್ದ ಕುಲಹಳ್ಳಿ, ಹುನ್ನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಏತ ನೀರಾವರಿ ಯೋಜನೆಯನ್ನು ಶೀಘ್ರ ಆರಂಭಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯೇ ರೈತರಿಗೆ ಭರವಸೆ ನೀಡಿದ್ದ ಶಾಸಕ ಸಿದ್ದು ಸವದಿ, ಮಾತಿನಂತೆ ನಿನ್ನೆ ತಡರಾತ್ರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಯೋಜನೆ ಕಾರ್ಯಾರಂಭವಾಗುವಂತೆ ಕ್ರಮ ಕೈಗೊಂಡರು.
ಯೋಜನೆಯಿಂದ ಕೃಷಿ ಭೂಮಿಗಳಿಗೆ ನೀರು ಹರಿಯಲಾರಂಭಿಸಿದ ಕ್ಷಣವನ್ನು ಕಂಡ ರೈತರು ಸಂತಸ ವ್ಯಕ್ತಪಡಿಸಿ ಶಾಸಕ ಸಿದ್ದು ಸವದಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಕೊಟ್ಟ ಮಾತನ್ನು ಉಳಿಸಿಕೊಂಡ ಜನಪ್ರತಿನಿಧಿ ಎಂದು ರೈತರು ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆ ಆರಂಭಗೊಂಡ ಹಿನ್ನೆಲೆಯಲ್ಲಿ ರೈತರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ, ರೈತರ ಹಿತಾಸಕ್ತಿಯೇ ತಮ್ಮ ಮೊದಲ ಆದ್ಯತೆ ಎಂದು ಹೇಳಿ, ಕೃಷಿಗೆ ಅಗತ್ಯವಿರುವ ನೀರನ್ನು ಸಮಯಕ್ಕೆ ಒದಗಿಸಲು ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು. ಯಾವುದೇ ರೈತರು ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕದಂತೆ ಅಗತ್ಯ ಕ್ರಮಗಳನ್ನು ಮುಂದೆಯೂ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸ್ಥಳದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದು, ಯೋಜನೆ ಆರಂಭಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ರೈತರ ಕರೆಗೆ ತಕ್ಷಣ ಸ್ಪಂದಿಸಿ ತಡರಾತ್ರಿಯೇ ಯೋಜನೆಗೆ ಚಾಲನೆ ನೀಡಿದ ಶಾಸಕರ ಕ್ರಮ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande