
ಬೆಂಗಳೂರು, 08 ಜುಲೈ (ಹಿ.ಸ.):
ಆ್ಯಂಕರ್:ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಂಗಳೂರು, ಧಾರವಾಡ, ಶಿವಮೊಗ್ಗ ಹಾಗೂ ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮತ್ತು ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಕುಂಬಳಗೋಡು ಗ್ರಾಮ ಪಂಚಾಯಿತಿಯ ಪಿಡಿಒ ಬಿ.ಕೆ. ತಿಮ್ಮಯ್ಯ ಅವರ ನಿವಾಸ, ತೋಟದ ಮನೆ ಹಾಗೂ ಸಂಬಂಧಿಕರ ಮನೆಗಳ ಮೇಲೆ ಬೆಂಗಳೂರು ದಕ್ಷಿಣ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಸ್ನೇಹ ನೇತೃತ್ವದಲ್ಲಿ ಶೋಧ ನಡೆಸಲಾಗಿದೆ. ಮಾಗಡಿ ತಾಲೂಕಿನ ಬೆಳಗವಾಡಿ ಗ್ರಾಮ ಸೇರಿದಂತೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲೂ ಪರಿಶೀಲನೆ ಮುಂದುವರಿದಿದೆ.
ಶಿವಮೊಗ್ಗ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಕಿರಣ್ ಅಂಗಡಿ ಅವರಿಗೆ ಸೇರಿದ ಶಿವಮೊಗ್ಗದ ಕಚೇರಿ, ಧಾರವಾಡದ ನಿವಾಸ, ಫಾರ್ಮ್‌ಹೌಸ್, ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ ಹಾಗೂ ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಇದೇ ವೇಳೆ ರಾಯಚೂರು ಜಿಲ್ಲೆಯ ಕೆಬಿಜೆಎನ್‌ಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಬಸನಗೌಡ ಅವರ ದೇವದುರ್ಗ ತಾಲೂಕಿನ ಕಚೇರಿ, ನಿವಾಸ ಹಾಗೂ ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.