

ಕೊಪ್ಪಳ, 08 ಜುಲೈ (ಹಿ.ಸ.)
ಆ್ಯಂಕರ್ : ಭಾಷಾ ಅಧಿನಿಯಮದಂತೆ ಜಿಲ್ಲೆಯಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಂತೆ ಜಿಲ್ಲೆಯಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳು, ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷಾ ಬಳಕೆ ಕಡ್ಡಾಯ. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಹೇಳಿದರು.
ಬುಧವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಅನುಷ್ಠಾನದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿದೆ. ಈ ಪ್ರಾಧಿಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಹಾಗೂ ತಿದ್ದುಪಡಿ ಅಧಿನಿಯಮ 2024 ದಡಿ ಕಾರ್ಯನಿರ್ವಹಿಸುತ್ತದೆ. ಅದರಂತೆ ಕನ್ನಡ ಅನುಷ್ಠಾನ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವುದು ಕೂಡ ಪ್ರಮುಖವಾಗಿದೆ. ಇದರ ಅಂಗವಾಗಿ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕನ್ನಡ ಭಾಷೆ ಅಭಿವೃದ್ಧಿಗೆ ಪೂರಕವಾಗಿರುತ್ತವೆ ಎಂದು ಹೇಳಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರಂತೆ ಜಿಲ್ಲೆಯ ಎಲ್ಲಾ ನಗರ ಪ್ರದೇಶಗಳಲ್ಲಿ, ಗ್ರಾಮಗಳಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು, ಸರ್ಕಾರಿ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊAದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು, ಹೋಟೆಲ್ಗಳು ಹಾಗೂ ಬ್ಯಾಂಕುಗಳು ಮಂತಾದವು ಅಳವಡಿಸಿದ ನಾಮಫಲಕಗಳಲ್ಲಿ ಕಡ್ಡಾಯವಾಗಿ ಒಂದು ತಿಂಗಳೊಳಗಾಗಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಬೇಕು. ತಪ್ಪಿದಲ್ಲಿ ಅಧಿನಿಯಮದ ಅನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸರ್ಕಾರ, ಸ್ಥಳೀಯ ಪ್ರಾಧಿಕಾರ, ಅನುದಾನಿತ ಅಥವಾ ಅನುದಾನ ರಹಿತ ಸಂಸ್ಥೆಗಳು ನಡೆಸುವ ಶಾಲಾ ಕಾರ್ಯಕ್ರಮಗಳಲ್ಲಿ ಬಳಸುವ ಕರಪತ್ರ, ಬ್ಯಾನರ್, ಫ್ಲೆಕ್ಸ್, ಎಲೆಕ್ಟಾçನಿಕ್ ಪ್ರದರ್ಶನ ಫಲಕಗಳು, ಮಾಹಿತಿಗಳು, ಸೂಚನಾ ಪತ್ರಗಳು, ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಇರುವಂತೆ ಕ್ರಮವಹಿಸಬೇಕು. ಸರ್ಕಾರವು ಕೈಗೊಂಡಂತಹ ಅಥವಾ ಸರ್ಕಾರದ ಸಂಬ0ಧಿತ ಸಂಸ್ಥೆಗಳು ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಯಾವುದೇ ರೀತಿಯ ಪ್ರತಿಫಲ, ಅನುದಾನ, ರಿಯಾಯಿತಿ ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದ ಫಲಕ, ಜಾಹೀರಾತು, ರಸೀದಿ, ಸೂಚನಾ ಪತ್ರಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಹಾಗೂ ತಿದ್ದುಪಡಿ ಅಧಿನಿಯಮ 2024ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರತಿ ತಾಲ್ಲೂಕಿನಲ್ಲಿ ಅಧಿನಿಯಮದನ್ವಯ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಮಿತಿಯನ್ನು ರಚಿಸಿ ಆಯಾ ತಾಲ್ಲೂಕಿನಾದ್ಯಂತ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಕ್ರಮವಹಿಸಬೇಕು. ಕ್ರಮವಹಿಸಿದ ವರದಿಯನ್ನು ಜಿಲ್ಲಾ ಸಮಿತಿಗೆ ಕಾಲಕಾಲಕ್ಕೆ ಸಲ್ಲಿಸಬೇಕು. ಉದ್ಯೋಗದಲ್ಲಿ ಜಿಲ್ಲೆಯ ವಾಣಿಜ್ಯ ಕೈಗಾರಿಕೆಗಳು, ಹೊಟೇಲ್ಗಳು, ಉದ್ಯಮ ಸಂಸ್ಥೆಗಳು, ಕಡ್ಡಾಯವಾಗಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ವಿಫಲವಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ – 2022ರ ಕಾಯ್ದೆಯಂತೆ ಸರ್ವರು ಕನ್ನಡ ಭಾಷಾ ಅನುಷ್ಠಾನಕ್ಕಾಗಿ ಶ್ರಮಿಸಬೇಕು. ಕನ್ನಡ ಭಾಷೆ ನಮ್ಮ ಸ್ವಾಭಿಮಾನವಾದ್ದರಿಂದ ಅದರ ಬಳಕೆ ಮತ್ತು ಉಳಿಯುವಿಕೆಗೆ ನಾವೆಲ್ಲರೂ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ವಿರುಪಣ್ಣ ನವಲಿ, ಜಿಲ್ಲಾ ಜಾಗೃತಿ ಸಮಿತಿಯ ಸದಸದ್ಯರಾದ ಜಿ.ಎಸ್ ಗೋನಾಳ, ಡಾ. ನಾಗರಾಜ ದಂಡೋತಿ, ಮಹೇಶ ಬಳ್ಳಾರಿ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ. ನಿಂಗಪ್ಪ ಕಂಬಳಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್