ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನು ಮಾರಾಟ ವಾಹನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಗದಗ, 08 ಜುಲೈ (ಹಿ.ಸ.) ಆ್ಯಂಕರ್:- ಮೀನುಗಾರರ ಆರ್ಥಿಕ ಸಬಲೀಕರಣ ಹಾಗೂ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಸುಲಭ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮೀನುಗಾರಿಕೆ ಇಲಾಖೆ 2026-27ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಮತ್ಸ್ಯವಾಹಿನಿ ಯೋಜನೆ ಅಡಿಯಲ್ಲಿ ತ್ರಿಚಕ್ರ ಮೀನು ಮಾರಾಟ ವಾಹನ
ಫೋಟೋ


ಗದಗ, 08 ಜುಲೈ (ಹಿ.ಸ.)

ಆ್ಯಂಕರ್:- ಮೀನುಗಾರರ ಆರ್ಥಿಕ ಸಬಲೀಕರಣ ಹಾಗೂ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಸುಲಭ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮೀನುಗಾರಿಕೆ ಇಲಾಖೆ 2026-27ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಮತ್ಸ್ಯವಾಹಿನಿ ಯೋಜನೆ ಅಡಿಯಲ್ಲಿ ತ್ರಿಚಕ್ರ ಮೀನು ಮಾರಾಟ ವಾಹನಗಳನ್ನು ಪರವಾನಿಗೆ ಆಧಾರದಲ್ಲಿ ವಿತರಿಸಲು ಅರ್ಹ ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಯೋಜನೆಯಡಿ ತಾಜಾ ಮೀನು ಹಾಗೂ ವಿವಿಧ ಮೀನು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ತ್ರಿಚಕ್ರ ವಾಹನಗಳನ್ನು ಒದಗಿಸಲಾಗುತ್ತದೆ. ಇದರಿಂದ ಮೀನು ಮಾರಾಟಗಾರರಿಗೆ ಸ್ವಯಂ ಉದ್ಯೋಗದ ಅವಕಾಶ ಹೆಚ್ಚುವುದರ ಜೊತೆಗೆ, ಗ್ರಾಹಕರಿಗೂ ಗುಣಮಟ್ಟದ ತಾಜಾ ಮೀನು ಸುಲಭವಾಗಿ ದೊರೆಯುವಂತಾಗಲಿದೆ.

2026-27ನೇ ಸಾಲಿನಲ್ಲಿ ಗದಗ ಜಿಲ್ಲೆಗೆ ಒಟ್ಟು ನಾಲ್ಕು ಭೌತಿಕ ಗುರಿಗಳನ್ನು ನಿಗದಿಪಡಿಸಲಾಗಿದೆ. ಆಯ್ಕೆಯಾಗುವ ಫಲಾನುಭವಿಗಳು ನಿಗದಿತ ಷರತ್ತುಗಳಂತೆ ಭದ್ರತಾ ಠೇವಣಿ ಪಾವತಿಸಬೇಕಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹1 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳು ₹50 ಸಾವಿರ ಭದ್ರತಾ ಠೇವಣಿ ಜಮಾ ಮಾಡಬೇಕು. ಜೊತೆಗೆ ವಾಹನ ಬಳಕೆಗೆ ಪ್ರತಿ ತಿಂಗಳು ₹3,000 ಬಾಡಿಗೆ ಪಾವತಿಸಬೇಕಾಗಿದೆ.

ಯೋಜನೆಯ ಪ್ರಯೋಜನ ಪಡೆಯಲು ಆಸಕ್ತ ಮೀನು ಮಾರಾಟಗಾರರು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜುಲೈ 24ರೊಳಗೆ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಗದಗ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ, ಮೀನುಗಾರಿಕೆ ಉಪ ನಿರ್ದೇಶಕರು, ಗದಗ (ಮೊ. 8217881696) ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮುಂಡರಗಿ (ಮೊ. 8095792530) ಇವರನ್ನು ಸಂಪರ್ಕಿಸಿ ಯೋಜನೆಯ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಗದಗ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿರುವ ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನದತ್ತ ಹೆಜ್ಜೆ ಇಡಬೇಕು ಎಂದು ಇಲಾಖೆ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande