ಮಳೆ ಕೊರತೆಯಿಂದ ಬೆಳವಣಿಗೆ ಕುಂಠಿತ: ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
ಗದಗ, 08 ಜುಲೈ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ಕೃಷಿ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರೈತರಿಗೆ ಮಹತ್ವದ ಸಲಹೆಗಳನ್ನು ನೀಡಿದೆ. ಜೂನ್ 1ರಿಂದ ಜುಲೈ 7ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.22.3ರಷ್ಟು ಕ
ಫೋಟೋ


ಗದಗ, 08 ಜುಲೈ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ಕೃಷಿ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರೈತರಿಗೆ ಮಹತ್ವದ ಸಲಹೆಗಳನ್ನು ನೀಡಿದೆ. ಜೂನ್ 1ರಿಂದ ಜುಲೈ 7ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.22.3ರಷ್ಟು ಕಡಿಮೆ ಮಳೆಯಾಗಿರುವುದರಿಂದ ಹೆಸರು, ಮುಸುಕಿನ ಜೋಳ, ಹತ್ತಿ, ಸೂರ್ಯಕಾಂತಿ, ನೆಲಗಡಲೆ ಸೇರಿದಂತೆ ಹಲವು ಪ್ರಮುಖ ಬೆಳೆಗಳು ತೇವಾಂಶದ ಕೊರತೆಯಿಂದ ಬೆಳವಣಿಗೆಯಲ್ಲಿ ಹಿನ್ನಡೆ ಅನುಭವಿಸುತ್ತಿವೆ ಎಂದು ಗದಗ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 2,39,280 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಇದು ಗುರಿಯ ಶೇ.76ರಷ್ಟಾಗಿದೆ. ಇನ್ನೂ 74,439 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಬಾಕಿಯಿದೆ. ಜುಲೈ ಅಂತ್ಯದವರೆಗೂ ಮಳೆ ಕೊರತೆ ಮುಂದುವರಿದರೆ ರೈತರು ಪರ್ಯಾಯ ಬೆಳೆ ಪದ್ಧತಿಗಳನ್ನು ಅನುಸರಿಸುವುದು ಹಾಗೂ ಕೃಷಿ ಇಲಾಖೆಯ ತಾಂತ್ರಿಕ ಸಲಹೆಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಇಲಾಖೆ ಸೂಚಿಸಿದೆ.

ಮಳೆ ಅಭಾವದ ಪರಿಸ್ಥಿತಿಯಲ್ಲಿ ದೇಸಿ ಹತ್ತಿ (ಸಹನಾ) ಬೆಳೆಯಲ್ಲಿ ಮೆಣಸಿನಕಾಯಿಯನ್ನು ಅಂತರ ಬೆಳೆಯಾಗಿ ಬೆಳೆಯಬಹುದು. ಹತ್ತಿ ಬೆಳೆಯಲ್ಲಿ ಸಾಲಿನ ಅಂತರವನ್ನು 120ರಿಂದ 135 ಸೆಂಟಿಮೀಟರ್ವರೆಗೆ ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ. ಈರುಳ್ಳಿ ಬೆಳೆ ಬೆಳೆಯುವ ರೈತರೂ ಇದೇ ರೀತಿಯ ಸಾಲಿನ ಅಂತರವನ್ನು ಕಾಯ್ದುಕೊಂಡು ಬಿತ್ತನೆ ಮಾಡಬೇಕು. ಶೇಂಗಾ ಬೆಳೆಯಲ್ಲಿ ಹಬ್ಬುವ ತಳಿ 'ಮರಡೂರ ಲೋಕಲ್' ಬಳಸುವುದರಿಂದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಸೂರ್ಯಕಾಂತಿ ಬೆಳೆಯಲ್ಲಿ RSFH-700 ತಳಿಯನ್ನು ಹಾಗೂ ಬಿಟಿ ಹತ್ತಿಯನ್ನು ಹೆಚ್ಚುವರಿ ಸಾಲಿನ ಅಂತರದಲ್ಲಿ ಬೆಳೆಯುವಂತೆ ಸೂಚಿಸಲಾಗಿದೆ.

ಕಪ್ಪು ಮಣ್ಣಿನ ಪ್ರದೇಶಗಳಲ್ಲಿ ಹಿಂಗಾರು ಬೆಳೆಗಳಿಗೆ ಅಗತ್ಯ ತೇವಾಂಶ ಸಂರಕ್ಷಿಸಲು ಚೌಕುಮಡಿ ಪದ್ಧತಿಯ ಮೂಲಕ ಮಳೆ ನೀರನ್ನು ಸಂಗ್ರಹಿಸುವುದು ಅತ್ಯಂತ ಪರಿಣಾಮಕಾರಿ ಎಂದು ಇಲಾಖೆ ತಿಳಿಸಿದೆ. ಇದರಿಂದ ಮಣ್ಣಿನ ತೇವಾಂಶ ಹೆಚ್ಚು ದಿನ ಉಳಿದು ಬೆಳೆಗಳಿಗೆ ಅನುಕೂಲವಾಗಲಿದೆ.

ಬಿತ್ತನೆಗೂ ಮುನ್ನ ಬೀಜಗಳನ್ನು ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 18 ಗಂಟೆಗಳ ಕಾಲ ನೆನೆಸಿ, ನಂತರ 24 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಿದರೆ ಮೊಳಕೆ ಪ್ರಮಾಣ ಹೆಚ್ಚುವುದರ ಜೊತೆಗೆ ಬರ ಪರಿಸ್ಥಿತಿಯನ್ನು ತಡೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಈಗಾಗಲೇ ಬಿತ್ತನೆಯಾಗಿರುವ ಹೆಸರು, ಮುಸುಕಿನ ಜೋಳ, ಹತ್ತಿ ಹಾಗೂ ನೆಲಗಡಲೆ ಬೆಳೆಗಳಲ್ಲಿ ತೇವಾಂಶದ ಕೊರತೆ ಕಂಡುಬಂದರೆ ಚೇತರಿಕೆಗಾಗಿ ಎಲೆಗಳಿಗೆ ಶೇ.2ರಷ್ಟು 19:19:19 ಗೊಬ್ಬರ ದ್ರಾವಣ ಅಥವಾ ಶೇ.2ರಷ್ಟು ಡಿಎಪಿ ಅಥವಾ ಶೇ.2ರಷ್ಟು ಯೂರಿಯಾ ದ್ರಾವಣವನ್ನು ಸಿಂಪಡಿಸಬೇಕು ಎಂದು ಸಲಹೆ ನೀಡಲಾಗಿದೆ. ಜೊತೆಗೆ ಕಳೆ ನಿಯಂತ್ರಣಕ್ಕಾಗಿ ಅಂತರ ಬೇಸಾಯ ಕೈಗೊಳ್ಳುವುದು ಹಾಗೂ ನೀರಿನ ಲಭ್ಯತೆ ಇರುವ ಪ್ರದೇಶಗಳಲ್ಲಿ ಹನಿ ಅಥವಾ ತುಂತುರು ನೀರಾವರಿ ಮೂಲಕ ಅಗತ್ಯ ಸಮಯದಲ್ಲಿ ನೀರು ಒದಗಿಸುವುದು ಬೆಳೆಗಳ ಉಳಿವಿಗೆ ಸಹಕಾರಿಯಾಗಲಿದೆ.

ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗದೆ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಬೇಕು. ಅಗತ್ಯ ತಾಂತ್ರಿಕ ಮಾರ್ಗದರ್ಶನ ಹಾಗೂ ಬೆಳೆ ನಿರ್ವಹಣೆ ಕುರಿತ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಗದಗ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande