ನೂತನ ಬೆಂಗಳೂರುಗಳ ನಿರ್ಮಾಣಕ್ಕೆ ಸರ್ಕಾರ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, 08 ಜುಲೈ (ಹಿ.ಸ.): ಆ್ಯಂಕರ್: ಬೆಂಗಳೂರಿನಲ್ಲಿರುವ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಉದ್ಯಮಾವಕಾಶಗಳನ್ನು ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೂ ವಿಸ್ತರಿಸಿ, ಬೆಂಗಳೂರಿನಾಚೆಗೆ ಹೊಸ ಬೆಂಗಳೂರುಗಳನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ
Cm file photo


ಬೆಂಗಳೂರು, 08 ಜುಲೈ (ಹಿ.ಸ.):

ಆ್ಯಂಕರ್:

ಬೆಂಗಳೂರಿನಲ್ಲಿರುವ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಉದ್ಯಮಾವಕಾಶಗಳನ್ನು ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೂ ವಿಸ್ತರಿಸಿ, ಬೆಂಗಳೂರಿನಾಚೆಗೆ ಹೊಸ ಬೆಂಗಳೂರುಗಳನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ನಗರಗಳಲ್ಲೂ ಉದ್ಯಮಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕಡಿಮೆ ವೆಚ್ಚದಲ್ಲಿ ಜಾಗ ಲಭ್ಯವಿದ್ದು, ಅಲ್ಲಿ ಡಬಲ್ ಎಫ್‌ಎಆರ್‌ಗೆ ಅವಕಾಶ ನೀಡುವ ಮೂಲಕ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಪ್ರತಿಭಾವಂತ ಮಾನವ ಸಂಪನ್ಮೂಲ ಲಭ್ಯವಿದ್ದು, ಉದ್ಯಮಗಳ ಬೆಳವಣಿಗೆಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ನಾವೆಲ್ಲರೂ 'ಟೀಮ್ ಕರ್ನಾಟಕ' ಎಂಬ ಮನೋಭಾವದಿಂದ ಕೆಲಸ ಮಾಡೋಣ. ಉದ್ಯಮಗಳ ಬೆಳವಣಿಗೆಯೇ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ₹1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದ ಸಿಎಂ, ಪ್ರತಿ ತಿಂಗಳು ಸುಮಾರು 30 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಲಾಗಿದೆ. 350 ಕಿ.ಮೀ. ಮೆಟ್ರೋ ಜಾಲವನ್ನು 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. 40 ಕಿ.ಮೀ. ಉದ್ದದ ಸುರಂಗ ರಸ್ತೆ, 44 ಕಿ.ಮೀ. ಡಬಲ್ ಡೆಕ್ಕರ್ ರಸ್ತೆ, 133 ಕಿ.ಮೀ. ಉದ್ದದ ಮೇಲ್ಸೇತುವೆಗಳು ಹಾಗೂ 123 ಕಿ.ಮೀ. ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ 257 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿವರ್ಷ ಸುಮಾರು 1.5 ಲಕ್ಷ ಎಂಜಿನಿಯರ್‌ಗಳು ಹೊರಬರುತ್ತಿದ್ದಾರೆ. ಬೆಂಗಳೂರು ಜಾಗತಿಕ ತಂತ್ರಜ್ಞಾನ ನಗರವಾಗಿ ಬೆಳೆದಿದ್ದು, ಇಲ್ಲಿನ ಪ್ರತಿಭೆ ಮತ್ತು ಸಾಮರ್ಥ್ಯದ ಕಾರಣ ಅನೇಕ ಜಾಗತಿಕ ಕಂಪನಿಗಳು ರಾಜ್ಯವನ್ನು ಆಯ್ಕೆ ಮಾಡುತ್ತಿವೆ ಎಂದು ಸಿಎಂ ಹೇಳಿದರು.

ಸಂಶೋಧನೆ, ನಾವೀನ್ಯತೆ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೂ ಸರ್ಕಾರ ಆದ್ಯತೆ ನೀಡುತ್ತಿದ್ದು, ಎಐ ವಿಶ್ವವಿದ್ಯಾಲಯ ಸ್ಥಾಪನೆ ಕುರಿತೂ ಚಿಂತನೆ ನಡೆಯುತ್ತಿದೆ. ಜಗತ್ತಿಗೆ ಬೇಕಾಗಿರುವ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಬೆಂಗಳೂರಿನಿಂದಲೇ ನೀಡುವ ಗುರಿ ನಮ್ಮದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸುಮಾರು 200ಕ್ಕೂ ಹೆಚ್ಚು ಜಿಸಿಸಿ ಪ್ರತಿನಿಧಿಗಳು ಸರ್ಕಾರಕ್ಕೆ ವಿವಿಧ ಸಲಹೆಗಳನ್ನು ನೀಡಿದ್ದಾರೆ. ಬೆಂಗಳೂರು ಹಾಗೂ ಇತರೆ ನಗರಗಳಲ್ಲಿ ಉದ್ಯಮ ವಿಸ್ತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande