






ಬಳ್ಳಾರಿ, 08 ಜುಲೈ (ಹಿ.ಸ.)
ಆ್ಯಂಕರ್ : ಪ್ರತಿಯೊಬ್ಬರೂ ಒಂದಿಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ಋಣ ಸಂದಾಯ ಮಾಡಬೇಕು ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಶ್ರೀಧರಗಡ್ಡೆ ಗ್ರಾಮದಲ್ಲಿ 11 ದಿನಗಳ ಕಾಲ ನಡೆದ ಅಥಣಿ ಮುರುಘೇಂಧ್ರ ಶಿವಯೋಗಿಗಳ ಪುರಾಣ ಮಂಗಲದಲ್ಲಿ ಅವರು ಮಂಗಳವಾರ ಆಶೀರ್ವಚನ ನೀಡಿದರು.
ಅಥಣಿ ಶಿವಯೋಗಿಗಳು ಅವರ ಶಿವಪೂಜೆ ನಿತ್ಯವೂ ಬಿಲ್ವ ಪತ್ರಿಯನ್ನು ನೀಡುತ್ತಿದ್ದ ಬಿಲ್ವಪತ್ರಿಯ ಗಿಡಕ್ಕೆ ಹೋಗಿ, ಋಣ ಸಂದಾಯ ಮಾಡಿದ್ದು ಪರಿಸರ ಪ್ರೀತಿ, ಪ್ರಕೃತಿಯನ್ನು ಕಾಪಾಡುವ ಜವಾಬ್ದಾರಿಯನ್ನು ತೋರಿದ್ದಾರೆ. ಗಿಡ ಮರಗಳಿಗೂ ಜೀವವಿದೆ ಎಂದು ತೋರಿದ್ದಾರೆ. ನಾವು - ನೀವೆಲ್ಲರೂ ಪ್ರಕೃತಿ ಋಣ, ತಾಯಿ ಋಣ, ಗುರು ಋಣ ಹೀಗೇ ನಾನಾ ರೀತಿಯ ಋಣಗಳನ್ನು ಕಾಲಕಾಲಕ್ಕೆ ಸಂದಾಯ ಮಾಡಿ, ಕೃತಾರ್ಥರಾಗಬೇಕು ಎಂದರು.
ಇಂದಿನ ಬಹುತೇಕ ಜನರು ಎಣಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಆದರೆ, ಎಣಿಸುವ ಆತುರದಲ್ಲಿ ಅನುಭವಿಸುವ ಮನಸ್ಥಿತಿಯನ್ನೇ ಕಳೆದುಕೊಳ್ಳುತ್ತಿರುವುದು ದುಃಖಕರ. ಪಾಸ್ ಬುಕ್ ನೋಡುತ್ತಲೇ ತಮ್ಮ ಶ್ವಾಸದ ಪುಸ್ತಕವನ್ನು ಮರೆತುಬಿಡುತ್ತಿದ್ದಾರೆ. ಪ್ರತಿಯೊಬ್ಬರು ಇದ್ದುದ್ದನ್ನು - ಇರುವುದನ್ನು ಅನುಭವಿಸುವ ಪ್ರಯತ್ನ ಮಾಡಿ ಜೀವನವನ್ನು ಅನುಭಾವಗೊಳಿಸುವ - ಸಾರ್ಥಕಗೊಳಿಸುವ ಪ್ರಯತ್ನ ಆಗಬೇಕು ಎಂದರು.
ಅಥಣಿ ಮುರುಘೇಂಧ್ರ ಶಿವಯೋಗಿಗಳ ಪುರಾಣ ಮಂಗಲದ ಕಾರಣ ಭಕ್ತಾಧಿಗಳು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಒಂಭತ್ತು ಶ್ರೀಗಳ ಜೋಡೆತ್ತಿನ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯಗಳ ಸಮೇತ ವಿಜೃಂಭಣೆಯಿಂದ ನಡೆಸಿ, ಶ್ರದ್ಧೆ ಮತ್ತು ಭಕ್ತಿಯನ್ನು ಸಮರ್ಪಿಸಿದ್ದಾರೆ.
ಜೋಡೆತ್ತಿನ ಮೆರವಣಿಗೆಯಲ್ಲಿ ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಕುರುಗೋಡಿನ ನಿರಂಜನ ಪ್ರಭು ಮಹಾಸ್ವಾಮಿಗಳು, ಸೋಮಸಮುದ್ರದ ಸಿದ್ದಲಿಂಗ ಮಹಾಸ್ವಾಮಿಗಳು, ಬೂದಗುಂಪದ ಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ದರೂರಿನ ಕೊಟ್ಟೂರು ಸ್ವಾಮಿಗಳು, ಅಡವಿ ಅಮರೇಶ್ವರ ತೋಂಟದಾರ್ಯ ಮಹಾಸ್ವಾಮಿಗಳು, ಹಾಗೂ ಲಿಂಗೈಕ್ಯ ಡಾ. ಜಗದ್ಗುರು ಸಂಗನಬಸವ ಮಹಾಸ್ವಾಮಿಗಳ ಮತ್ತು ಹಾನಗಲ್ಲು ಕುಮಾರೇಶ್ವರರ ಮೂರ್ತಿಯನ್ನು ಗ್ರಾಮಸ್ಥರು ಜೋಡೆತ್ತಿನ ಬಂಡಿಯಲ್ಲಿ ಕೂಡಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ, ಭಕ್ತಿಯನ್ನು ಪ್ರದರ್ಶಿಸಿದ್ದಾರೆ.
ಮಂಗಳವಾರ ಸಂಜೆ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಗ್ರಾಮದ ಹೆಂಗಳೆಯರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಅಥಣಿ ಮುರುಘೇಂಧ್ರ ಶಿವಯೋಗಿಗಳ ಪುರಾಣ ಮಂಗಲದಲ್ಲಿ ಪಾಲ್ಗೊಂಡು ಭಕ್ತಿ, ಶ್ರದ್ಧೆಯನ್ನು ತೋರಿದರು. ಶ್ರೀಧರಗಡ್ಡೆಯ ಸುತ್ತಲಿನ ಹಲವಾರು ಗ್ರಾಮಗಳ ಭಕ್ತಾಧಿಗಳು ಈ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪುರಾಣ ಮಂಗಲಕ್ಕಾಗಿ ಮಹಿಳೆಯರು - ಯುವತಿಯರು ದೀಪಗಳನ್ನು ಬೆಳಗಿದ್ದು ವಿಶೇಷವಾಗಿತ್ತು.
ಮೈಸೂರಿನ ನಿರಂಜನ ದೇವರು ಅವರು 11 ದಿನಗಳ ಕಾಲ ಅಥಣಿ ಮುರುಘೇಂಧ್ರ ಶಿವಯೋಗಿಗಳ ಪುರಾಣದ ಪ್ರವಚನವನ್ನು ನಡೆಸಿ, ಭಕ್ತಾಧಿಗಳಲ್ಲಿ ಅಥಣಿ ಶಿವಯೋಗಿಗಳ ಕುರಿತು ಮನಮುಟ್ಟುವಂತೆ ಭಕ್ತಿಯನ್ನು ಮೂಡಿಸಿದ್ದರು. ಕೊತ್ತಲಚಿಂತಾ ಶರಣಕುಮಾರ ಗವಾಯಿಗಳು ಸಂಗೀತ ಸೇವೆ ನಡೆಸಿ, ಉಮಳಿ ಹೊಸೂರುನ ಮಲ್ಲಿಕಾರ್ಜುನಗೌಡ ಅವರು ತಬಲಾ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ ತುಲಾಭಾರವನ್ನು ಶ್ರೀಧರಗಡ್ಡೆಯ ಅಕ್ಕನ ಬಳಗದ ಸದಸ್ಯರು ನೆರವೇರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್