ಸ್ವಸ್ಥ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅನನ್ಯ: ನೇಹಾ ಹಿರೇಗೌಡರ
ಗದಗ, 08 ಜುಲೈ (ಹಿ.ಸ.) ಆ್ಯಂಕರ್:- ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಖ್ಯಾತ ದಂತ ವೈದ್ಯೆ ಡಾ. ನೇಹಾ ಹಿರೇಗೌಡರ ಕರೆ ನೀಡಿದರು. ಗದಗ ನಗರದ ಐತಿಹಾಸಿಕ ಹಾಳಕೇರಿ ಅ
ಫೋಟೋ


ಗದಗ, 08 ಜುಲೈ (ಹಿ.ಸ.)

ಆ್ಯಂಕರ್:- ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಖ್ಯಾತ ದಂತ ವೈದ್ಯೆ ಡಾ. ನೇಹಾ ಹಿರೇಗೌಡರ ಕರೆ ನೀಡಿದರು.

ಗದಗ ನಗರದ ಐತಿಹಾಸಿಕ ಹಾಳಕೇರಿ ಅನ್ನದಾನೇಶ್ವರ ಮಠದಲ್ಲಿ ಅಖಿಲ ಕರ್ನಾಟಕ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಹಿಳಾ ವಿವಿಧೋದ್ದೇಶಗಳ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ವೇಗದ ಆಧುನಿಕ ಜೀವನದಲ್ಲಿ ಆರೋಗ್ಯವೇ ನಿಜವಾದ ಸಂಪತ್ತು. ಉತ್ತಮ ಆರೋಗ್ಯಕ್ಕಾಗಿ ನಿಯಮಿತ ವ್ಯಾಯಾಮ, ಸಮತೋಲನಯುತ ಆಹಾರ ಸೇವನೆ, ಸಮಯಕ್ಕೆ ಸರಿಯಾದ ನಿದ್ರೆ ಹಾಗೂ ಶಿಸ್ತುಬದ್ಧ ಜೀವನಶೈಲಿ ಅತ್ಯಗತ್ಯ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮುನ್ನೆಚ್ಚರಿಕೆಯ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಮಾನವೀಯ ಸೇವೆಯ ಪ್ರತೀಕವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಿ, ಹೊಸ ಜೀವನವನ್ನು ನೀಡುವ ಮಹತ್ತರ ಜವಾಬ್ದಾರಿ ವೈದ್ಯರ ಮೇಲಿದೆ. ಇಂತಹ ಪವಿತ್ರ ವೃತ್ತಿಯನ್ನು ನಿರ್ವಹಿಸುವ ಅವಕಾಶ ದೊರೆತಿರುವುದು ತಮ್ಮ ಪಾಲಿನ ಸೌಭಾಗ್ಯ ಎಂದು ಅವರು ಹೇಳಿದರು.

ಕೊರೊನಾ ಮಹಾಮಾರಿಯ ಸಂಕಷ್ಟದ ದಿನಗಳನ್ನು ಸ್ಮರಿಸಿದ ಡಾ. ನೇಹಾ ಹಿರೇಗೌಡರ, ಸೋಂಕಿನ ಭೀತಿಯ ನಡುವೆಯೂ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲಿರುಳು ಸೇವೆ ಸಲ್ಲಿಸಿದ ವೈದ್ಯರು, ದಾದಿಯರು ಹಾಗೂ ಆರೋಗ್ಯ ಸಿಬ್ಬಂದಿಯ ತ್ಯಾಗ ದೇಶ ಎಂದಿಗೂ ಮರೆಯುವುದಿಲ್ಲ. ಸಾವಿರಾರು ಜೀವಗಳನ್ನು ಉಳಿಸಲು ಅವರು ಸಲ್ಲಿಸಿದ ಸೇವೆ ಮಾನವೀಯತೆಯ ಅತ್ಯುನ್ನತ ಉದಾಹರಣೆಯಾಗಿದೆ. ವೈದ್ಯರ ಸೇವೆಯನ್ನು ಗೌರವಿಸುವ ಮನೋಭಾವ ಸಮಾಜದಲ್ಲಿ ಇನ್ನಷ್ಟು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮತ್ತೋರ್ವ ಪ್ರಮುಖ ಅತಿಥಿಯಾಗಿ ಭಾಗವಹಿಸಿದ್ದ ಉಪನ್ಯಾಸಕಿ ವೀಣಾ ತೀರ್ಲಾಪುರ ಮಾತನಾಡಿ, ಸಾರ್ವಜನಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗದಗ ನಗರದ ಕೆ.ಎಲ್.ಇ. ಕಾಲೇಜಿನಲ್ಲಿ ಮುಂಬರುವ ಜುಲೈ 17ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಾಮಾನ್ಯ ಆರೋಗ್ಯ ತಪಾಸಣೆ, ತಜ್ಞ ವೈದ್ಯರ ಸಲಹೆ ಹಾಗೂ ವಿವಿಧ ಆರೋಗ್ಯ ಸೇವೆಗಳು ಈ ಶಿಬಿರದಲ್ಲಿ ಲಭ್ಯವಾಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಪ್ರೇಮಾ ಮೇಟಿ ವಹಿಸಿ ಮಾತನಾಡಿ, ಸಮಾಜದ ಆರೋಗ್ಯ ಸುಧಾರಣೆಗೆ ವೈದ್ಯರು ಸಲ್ಲಿಸುತ್ತಿರುವ ಸೇವೆ ಅನನ್ಯವಾಗಿದೆ. ವೈದ್ಯರ ದಿನಾಚರಣೆ ಕೇವಲ ಗೌರವ ಸಲ್ಲಿಸುವ ಕಾರ್ಯಕ್ರಮವಾಗಿರದೆ, ಆರೋಗ್ಯದ ಮಹತ್ವವನ್ನು ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ವೇದಿಕೆಯಾಗಬೇಕು ಎಂದು ಹೇಳಿದರು. ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದೆಯೂ ನಿರಂತರವಾಗಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಟ್ರಸ್ಟ್ನ ಖಜಾಂಚಿ ಶ್ರೀಮತಿ ಸರೋಜಾ ಫೈಲ್ ಹಾಗೂ ಸುಮಂಗಲಾ ರೆಡ್ಡೇರ ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲಾ ಲಕ್ಕನಗೌಡರ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯ ಅತಿಥಿಗಳನ್ನು ಸರೋಜಾ ಫೈಲ್ ಪರಿಚಯಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಮಧು ಪಾಟೀಲ್ ಅಚ್ಚುಕಟ್ಟಾಗಿ ನಿರೂಪಿಸಿದರು. ಯೋಗೇಶ್ವರಿ ಭಾವಿಕಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ನ ಪ್ರಮುಖ ಸದಸ್ಯರಾದ ಬಸಮ್ಮ ಭಾವಿಕಟ್ಟಿ, ಸರೋಜಾ ಚೇಗರೆಡ್ಡಿ, ಅಕ್ಕಮ್ಮ ರೆಡ್ಡೇರ, ಕವಿತಾ ಕಣ್ಣೂರ, ಶಿವಲೀಲಾ ಭಾವಿಕಟ್ಟಿ, ಮಂಜುಳಾ ದೊಡ್ಡಮನಿ, ಶಾರದಾ ಗೋವಣ್ಣವರ, ಶಾಂತಾ ದೊಡ್ಡಮನಿ, ಗಿರಿಜಾ ಸುಲೇಬಾನ, ಲಕ್ಷ್ಮಿ ಚೇಗರೆಡ್ಡಿ, ಜಯಶ್ರೀ ಗೌಡರ ಸೇರಿದಂತೆ ಟ್ರಸ್ಟ್ನ ಎಲ್ಲಾ ಪದಾಧಿಕಾರಿಗಳು, ಮಹಿಳಾ ಸದಸ್ಯರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande