ನಿಖರ ಬೆಳೆ ಹಾನಿ ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ
ಗದಗ, 08 ಜುಲೈ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಅಭಾವ ಹಾಗೂ ಕೃಷಿ ಬೆಳೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ನಿಖರ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು
ಫೋಟೋ


ಗದಗ, 08 ಜುಲೈ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಅಭಾವ ಹಾಗೂ ಕೃಷಿ ಬೆಳೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ನಿಖರ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಳೆ ಕೊರತೆಯಿಂದ ಒಣಗುತ್ತಿರುವ ಬೆಳೆಗಳು, ಪರ್ಯಾಯ ಬೆಳೆ ಯೋಜನೆ ಹಾಗೂ ರೈತರಿಗೆ ನೀಡಬೇಕಾದ ಮಾರ್ಗಸೂಚಿಗಳ ಕುರಿತು ಸುದೀರ್ಘವಾಗಿ ಜಿಲ್ಲಾಧಿಕಾರಿಗಳು ವಿವಿಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಜುಲೈ 15ರ ನಂತರವೂ ಮಳೆ ಕೊರತೆಯಾಗುವ ಮುನ್ಸೂಚನೆ ಇರುವುದರಿಂದ, ಹೆಚ್ಚಿನ ಕಡೆಗಳಲ್ಲಿ ಮರು ಬಿತ್ತನೆಗೆ ಅವಕಾಶಗಳು ಕಡಿಮೆ ಇವೆ. ಬಿತ್ತನೆಯಾಗದೇ ಉಳಿದ ಪ್ರದೇಶದಲ್ಲಿ ಕಡಿಮೆ ಅವಧಿಯ ಪರ್ಯಾಯ ತಳಿಗಳಾದ ಈರುಳ್ಳಿ ಅಥವಾ ಅಲ್ಪಾವಧಿ ತರಕಾರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಕೃಷಿ ಇಲಾಖೆಯಿಂದ ತಕ್ಷಣವೇ ಸೂಕ್ತ ತಾಂತ್ರಿಕ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಅಲ್ಲಲ್ಲಿ ಬೀಳುತ್ತಿರುವ ಸಾಧಾರಣ ಮಳೆಯಿಂದಾಗಿ ರೈತರಲ್ಲಿ ಸಣ್ಣದೊಂದು ಆಶಾಭಾವನೆ ಮೂಡಿದೆ ಎಂದರು. ಜಿಲ್ಲೆಯಲ್ಲಿ ಸದ್ಯ ಶೇಕಡಾ 20 ರಿಂದ 30 ರಷ್ಟು ಭಾಗಗಳಲ್ಲಿ ಮಾತ್ರ ಮೊಳಕೆಯೊಡೆದ ಸಸಿಗಳು ಹಸಿರಾಗಿವೆ. ಇನ್ನುಳಿದ ಕೆಲವು ಭಾಗಗಳಲ್ಲಿ ಶೇಕಡಾ 20 ರಿಂದ 30 ರಷ್ಟು ಜರ್ಮಿನೇಷನ್ (ಮೊಳಕೆಯೊಡೆಯುವಿಕೆ) ಪ್ರಕ್ರಿಯೆ ಸಂಪೂರ್ಣ ಒಣಗಿಹೋಗಿದ್ದು, ಇನ್ನುಳಿದ ಭಾಗಗಳಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆಗಳು ಬಾಡುತ್ತಿವೆ ಎಂದು ಕಳವಳ ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಶೇಕಡಾ 40 ರಿಂದ 50 ರಷ್ಟು ಇಳುವರಿ ನಿರೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದರು.

ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಕೃತಕ ಅಭಾವ ಸೃಷ್ಟಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಂಟಿ ಕೃಷಿ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಒಂದು ವೇಳೆ ಜಿಲ್ಲೆಯಲ್ಲಿ ಮಳೆ ಹೆಚ್ಚಾದಲ್ಲಿ ಗೊಬ್ಬರದ ಬೇಡಿಕೆಯೂ ಹೆಚ್ಚಾಗುವ ಸಂಭವವಿದ್ದು ಪರಿಸ್ಥಿತಿಗೆ ತಕ್ಕಂತೆ ರಸಗೊಬ್ಬರದ ದಾಸ್ತಾನು ಇಟ್ಟುಕೊಳ್ಳಲು ಕ್ರಮ ವಹಿಸಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಸೂಚಿಸಿದರು.

ಬೆಳೆ ವಿಮೆ ಮತ್ತು 'ಆಪ್ಟ್-ಔಟ್' ನಿಯಮಗಳ ಕುರಿತು ಚರ್ಚೆ

ರೈತರಿಗೆ ಬೆಳೆ ವಿಮೆಯ ಸೌಲಭ್ಯ ಸಮರ್ಪಕವಾಗಿ ತಲುಪುವಂತೆ ಕೃಷಿ ಇಲಾಖೆಯ ನೋಡಿಕೊಳ್ಳಬೇಕು. ಪ್ರಮುಖವಾಗಿ ಬೆಳೆ ಸಾಲ ಪಡೆಯುವ ರೈತರಿಗೆ ವಿಮೆಯಿಂದ ಹೊರಗುಳಿಯಲು ಇರುವ 'ಆಪ್ಟ್-ಔಟ್' ಆಯ್ಕೆಯ ಕುರಿತು ಚರ್ಚಿಸಿ, ರೈತರು ತಮಗೆ ಇಷ್ಟವಿರುವ ಅಥವಾ ತಾವು ಬೆಳೆದ ಬೆಳೆಗೆ ಮಾತ್ರ ವಿಮೆ ಮಾಡಿಸಲು ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಹಾಗೂ ಸರ್ಕಾರದ ನಿಯಮಾವಳಿಗಳಂತೆ ರೈತರಿಗೆ ಗರಿಷ್ಠ ಅನುಕೂಲ ಮಾಡಿಕೊಡಲು ಜಿಲ್ಲಾಧಿಕಾರಿ ಸೂಚನೆ ನೀಡಿದರು .

ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಬೆಳೆ ಸಮೀಕ್ಷೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ಕಾರ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬ್ಯಾಂಕ್ಗಳ ಮೂಲಕ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿ ತಲುಪುವಂತಾಗಬೇಕು. ವಿಮಾ ಯೋಜನೆಗೆ ನೋಂದಾಯಿಸಿಕೊಳ್ಳಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಗರಿಷ್ಠ ಸಂಖ್ಯೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬ್ಯಾಂಕ್ಗಳು ಹಾಗೂ ಕೃಷಿ ಇಲಾಖೆ ಸಮನ್ವಯತೆಯಿಂದ ಕೆಲಸ ಮಾಡಬೇಕು. ರೈತರಲ್ಲಿ ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕೆಂದರು.

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಡಿ.ಬಿ.ಒ.ಟಿ ಹಾಗೂ ಮಲ್ಟಿ ವಿಲೇಜ್ ಯೋಜನೆಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸ್ಥಿತಿಗತಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲೆಯಲ್ಲಿನ ಎಲ್ಲ ತಾಲೂಕುಗಳಲ್ಲಿನ ಬೋರ್ವೆಲ್ಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ನೀರಿನ ಮೂಲಗಳ ಮಾಹಿತಿಯನ್ನು ಪಡೆದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಪರ್ಯಾಯ ಮೂಲಗಳಿಂದ ನೀರಿನ ಸರಬರಾಜು ಪ್ರಮಾಣವನ್ನು ಸುಧಾರಿಸಲು ನಿರ್ದೇಶನ ನೀಡಿದರು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಪೂರೈಕೆಯಲ್ಲಿ ಅಭಾವ ಉಂಟಾಗಬಾರದು ಎಂದು ಸೂಚನೆ ನೀಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಾನಿಗೊಳಗಾಗಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು. ಕಳಚಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಮತ್ತು ವಿದ್ಯುತ್ ಪರಿವರ್ತಕಗಳ (ಟಿಸಿ) ತಕ್ಷಣವೇ ಮರುಸ್ಥಾಪಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ್ ಅವರು ಮಾತನಾಡಿ ಒಟ್ಟು ಬಿತ್ತನೆ ಗುರಿ 313719 ಹೆಕ್ಟೇರ್ ಪ್ರದೇಶ ಇದ್ದು ಆ ಪೈಕಿ 239280 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಮೆಕ್ಕೆ ಜೋಳ, ಹೆಸರು, ತೊಗರಿ, ಸೂರ್ಯಕಾಂತಿ ಹತ್ತಿ ಮುಖ್ಯಬೆಳೆಗಳಾಗಿವೆ. ತೇವಾಂಶದ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿರುತ್ತವೆ ಎಂದು ಸಭೆಗೆ ವಿವರಿಸಿದರು ಹಾಗೂ ಪರ್ಯಾಯ ಬೆಳೆ ಪದ್ಧತಿ ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಬಿತ್ತನೆ ಕಾರ್ಯ ಹಾಗೂ ವಿಮಾ ನೋಂದಣಿಯ ಅಂಕಿ-ಅಂಶಗಳನ್ನು ಬ್ಯಾಂಕ್ವಾರು ಪರಿಶೀಲಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಯಾವುದೇ ರೈತರು ವಿಮೆಯಿಂದ ವಂಚಿತರಾಗದಂತೆ ಕ್ರಮ ವಹಿಸಲಾಗುವುದು ಎಂದು ಚೇತನಾ ಪಾಟೀಲ್ ಅವರು ಸಭೆಗೆ ತಿಳಿಸಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೋಟೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ತಹಶೀಲ್ದಾರರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande