ವಿಜಯಪುರ: ಎಸ್ಐಆರ್ ಪ್ರಕ್ರಿಯೆಯ ಪರಿಶೀಲಿಸಿದ ಜಿಲ್ಲಾಧಿಕಾರಿ ಕೆ. ಆನಂದ್
ವಿಜಯಪುರ, 08 ಜುಲೈ (ಹಿ.ಸ.) ಆ್ಯಂಕರ್ : ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ವಿಜಯಪುರ ನಗರದ ವಾರ್ಡ್ ಸಂಖ್ಯೆ 6ರ ವ್ಯಾಪ್ತಿಯ ಬೂತ್ ಸಂಖ್ಯೆ 2ಕ್ಕೆ ಜಿಲ್ಲಾಧಿಕಾರಿ ಕೆ. ಆನಂದ್ ಅವರು ಇಂದು ಬೆಳಿಗ್ಗೆ ಭೇಟಿ ನೀಡಿ, ಬೂತ್ ಮಟ್ಟದ ಅಧಿಕಾರಿಗಳ
ಡಿಸಿ


ವಿಜಯಪುರ, 08 ಜುಲೈ (ಹಿ.ಸ.)

ಆ್ಯಂಕರ್ : ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ವಿಜಯಪುರ ನಗರದ ವಾರ್ಡ್ ಸಂಖ್ಯೆ 6ರ ವ್ಯಾಪ್ತಿಯ ಬೂತ್ ಸಂಖ್ಯೆ 2ಕ್ಕೆ ಜಿಲ್ಲಾಧಿಕಾರಿ ಕೆ. ಆನಂದ್ ಅವರು ಇಂದು ಬೆಳಿಗ್ಗೆ ಭೇಟಿ ನೀಡಿ, ಬೂತ್ ಮಟ್ಟದ ಅಧಿಕಾರಿಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಪರಿಶೀಲನೆ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ, ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಸೇರಿದಂತೆ ನಡೆಯುತ್ತಿರುವ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರತಿಯೊಬ್ಬ ಅರ್ಹ ಮತದಾರನಿಗೂ ಮತದಾನದ ಹಕ್ಕು ದೊರೆಯುವಂತೆ ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಿಸುವಂತೆ ಬಿಎಲ್ಒಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿಜಯಕುಮಾರ್ ಮೆಕ್ಕಳಕಿ, ಮಹಾನಗರ ಪಾಲಿಕೆ ಆಯುಕ್ತರು, ವಾರ್ಡ್ನ ಪಾಲಿಕೆ ಸದಸ್ಯ ಮಳುಗೌಡ ಪಾಟೀಲ್, ವಲಯ ಆಯುಕ್ತ ಚಿತ್ತರಗಿ ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿ ಉಪಸ್ಥಿತರಿದ್ದು, ಪರಿಶೀಲನಾ ಕಾರ್ಯದಲ್ಲಿ ಭಾಗವಹಿಸಿದರು.

ಜಿಲ್ಲಾಧಿಕಾರಿಗಳ ಭೇಟಿ ಹಿನ್ನೆಲೆಯಲ್ಲಿ ಬೂತ್ ನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿಯನ್ನು ಅವಲೋಕಿಸಲಾಯಿತು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಈ ಭೇಟಿ ಮೂಲಕ ಚುನಾವಣಾ ಸಂಬಂಧಿತ ಕಾರ್ಯಗಳ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ಜೊತೆಗೆ, ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬದ್ಧವಾಗಿದೆ ಎಂಬ ಸಂದೇಶವನ್ನು ಜಿಲ್ಲಾಧಿಕಾರಿಗಳು ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande