
ಬೆಂಗಳೂರು, 08 ಜುಲೈ (ಹಿ.ಸ.):
ಆ್ಯಂಕರ್:
ಡಿಸಿಇಟಿ-2026ಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಜುಲೈ 15ರಿಂದ 17ರವರೆಗೆ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ನಡೆಯಲಿದೆ.
'ಬಿ'ಯಿಂದ 'ಒ'ವರೆಗಿನ ಕಂಡಿಕೆಗಳಡಿ ಕ್ಷೇಮ್ ಮಾಡಿರುವ ಅಭ್ಯರ್ಥಿಗಳು, ಅರ್ಹತಾ ಕಂಡಿಕೆ 'ಎ'ಯನ್ನು ಪ್ಲೇಮ್ ಮಾಡಿ ಹೊರರಾಜ್ಯದ ಬೋರ್ಡ್ಗಳಿಂದ ಡಿಪ್ಲೊಮಾ ತೇರ್ಗಡೆಯಾದವರು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ, ಜಿಟಿಟಿಸಿ, ಸಿಪಿಐಟಿ ಮತ್ತು ಜವಳಿ ಕೈಗಾರಿಕಾ ಇಲಾಖೆಗಳ ಬೋರ್ಡ್ಗಳನ್ನು ಹೊರತುಪಡಿಸಿ ಇತರೆ ಬೋರ್ಡ್ಗಳಿಂದ ಡಿಪ್ಲೊಮಾ ಪಡೆದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ಅಭ್ಯರ್ಥಿಗಳು ಮೂರು ದಿನಗಳ ಪೈಕಿ ಯಾವುದಾದರೊಂದು ದಿನಕ್ಕೆ ಸ್ಲಾಟ್ ಬುಕ್ ಮಾಡಿಕೊಂಡು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರೊಳಗೆ ಕಚೇರಿಗೆ ಖುದ್ದಾಗಿ ಹಾಜರಾಗಬೇಕು. ಅಭ್ಯರ್ಥಿಯ ಪರವಾಗಿ ಬೇರೆಯವರಿಗೆ ಹಾಜರಾಗಲು ಅವಕಾಶ ಇರುವುದಿಲ್ಲ.
ಅರ್ಜಿಯಲ್ಲಿ ಕೋರಿರುವ ಕ್ಷೇಮುಗಳಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳು ಹಾಗೂ ದೃಢೀಕರಿಸಿದ ಒಂದು ಸೆಟ್ ನಕಲು ಪ್ರತಿಗಳನ್ನು ಸಲ್ಲಿಸಬೇಕು. ಅಂಕಪಟ್ಟಿ ಅಥವಾ ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / SNEHA K