
ಬಾಗಲಕೋಟೆ, 08 ಜುಲೈ (ಹಿ.ಸ.)
ಆ್ಯಂಕರ್ : ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದರು. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಟುವಾದ ಟೀಕೆಗಳನ್ನು ಮಾಡಿದರು.
ಪಾಕಿಸ್ತಾನ ಕಾಂಗ್ರೆಸ್ನವರ ಪಾಪದ ಕೂಸು ಎಂದು ಆರೋಪಿಸಿದ ಸಿ.ಟಿ. ರವಿ, ದೇಶ ವಿಭಜನೆಗೆ ಕಾಂಗ್ರೆಸ್ನ ನೀತಿಗಳೇ ಕಾರಣವೆಂದು ದೂರಿದರು. ದೇಶದ ಇತಿಹಾಸವನ್ನು ಜನತೆ ಮರೆಯಬಾರದು ಎಂದು ಅವರು ಹೇಳಿದರು.
ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಪಕ್ಷವನ್ನು ಟೀಕಿಸದೇ ಇದ್ದರೆ ಪ್ರಿಯಾಂಕ್ ಖರ್ಗೆಗೆ ತಿಂದ ಅನ್ನವೇ ಜೀರ್ಣವಾಗುವುದಿಲ್ಲ. ಪ್ರತಿದಿನ ಬಿಜೆಪಿ ವಿರುದ್ಧ ಮಾತನಾಡುವುದನ್ನೇ ಅವರು ತಮ್ಮ ರಾಜಕೀಯದ ಮುಖ್ಯ ಕೆಲಸ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಅಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಮಾತನಾಡಿದ ಸಿ.ಟಿ. ರವಿ,
ಆರ್ ಎಸ್ ಎಸ್ ಸಂಘಟನೆಯನ್ನು ಟೀಕಿಸದಿದ್ದರೆ ಪ್ರಿಯಾಂಕ್ ಖರ್ಗೆಗೆ ನಿದ್ದೆಯೇ ಬರುವುದಿಲ್ಲ. ದೇಶಸೇವೆ, ಸಮಾಜಸೇವೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಸಂಘಟನೆಯ ವಿರುದ್ಧ ಕಾಂಗ್ರೆಸ್ ನಾಯಕರು ನಿರಂತರವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಜನರ ಸಮಸ್ಯೆಗಳತ್ತ ಗಮನ ಹರಿಸುವ ಬದಲು ಬಿಜೆಪಿ ಹಾಗೂ
ಆರ್ ಎಸ್ಎಸ್ ವಿರುದ್ಧ ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ ಎಂದು ಅವರು ದೂರಿದರು. ಆಡಳಿತ ವೈಫಲ್ಯಗಳನ್ನು ಮರೆಮಾಚುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿ, ರೈತರ ಸಮಸ್ಯೆ, ಕಾನೂನು ಮತ್ತು ಸುವ್ಯವಸ್ಥೆ, ಬೆಲೆ ಏರಿಕೆ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕೇ ಹೊರತು ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗಬಾರದು ಎಂದು ಸಿ.ಟಿ. ರವಿ ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande