
ಬೆಂಗಳೂರು, 08 ಜುಲೈ (ಹಿ.ಸ.):
ಆ್ಯಂಕರ್:
ಬನಶಂಕರಿ ಜಂಕ್ಷನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ, ಬನಶಂಕರಿ ಜಂಕ್ಷನ್ನಲ್ಲಿ ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಕೈವಾಕ್ ನಿರ್ಮಾಣದ ಅಗತ್ಯತೆ ಕುರಿತು ಚರ್ಚೆ ನಡೆಸಲಾಯಿತು. ಜೊತೆಗೆ, ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಫ್ಲೈಓವರ್ ಅಥವಾ ಅಂಡರ್ಪಾಸ್ ನಿರ್ಮಾಣದ ಸಾಧ್ಯತೆಗಳ ಬಗ್ಗೆಯೂ ಅಧಿಕಾರಿಗಳು ಸಮಾಲೋಚನೆ ನಡೆಸಿದರು.
ಎರಡೂ ಯೋಜನೆಗಳ ಅಗತ್ಯತೆ, ಅಂದಾಜು ವೆಚ್ಚ, ಅನುಷ್ಠಾನದ ಸಾಧ್ಯತೆ ಹಾಗೂ ಸಾಧಕ-ಬಾಧಕಗಳ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಯಿತು.
ಸಭೆಯ ಬಳಿಕ ಮಾತನಾಡಿದ ಆಯುಕ್ತ ಕೆ.ಎನ್. ರಮೇಶ್, ಸ್ಕೈವಾಕ್ ಹಾಗೂ ಗ್ರೇಡ್ ಸೆಪರೇಟರ್ ಯೋಜನೆಗಳ ಅಗತ್ಯತೆ, ವೆಚ್ಚ ಮತ್ತು ಇತರೆ ಅಂಶಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಿದ್ಧಪಡಿಸಲಾಗುವುದು. ಬಳಿಕ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು, ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / SNEHA K