
ಕೋಲಾರ, 08 ಜುಲೈ (ಹಿ.ಸ.):
ಆ್ಯಂಕರ್:ಕೋಲಾರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಹಾಗೂ ಗಣತಿ ಕಾರ್ಯ ಭರದಿಂದ ಸಾಗುತ್ತಿದ್ದು, ಜುಲೈ 8ರಂದು ಸಂಜೆ 4 ಗಂಟೆಯ ವೇಳೆಗೆ ಶೇ. 94.94ರಷ್ಟು ಮತದಾರರಿಗೆ ನಮೂನೆಗಳ ವಿತರಣೆ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಿಸಿದೆ.
ಜೂನ್ 16, 2026ರ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 12,95,265 ಮತದಾರರಿದ್ದು, ಈ ಪೈಕಿ 12,29,674 ಮತದಾರರಿಗೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೂಲಕ ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸಲಾಗಿದೆ. ವಿತರಣಾ ಕಾರ್ಯ ಅಂತಿಮ ಹಂತ ತಲುಪಿದ್ದು, ಉಳಿದ ನಮೂನೆಗಳನ್ನು ಶೀಘ್ರದಲ್ಲೇ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ನಮೂನೆಗಳ ಡಿಜಿಟಲೀಕರಣ ಪ್ರಕ್ರಿಯೆಯೂ ಸಮಾನಾಂತರವಾಗಿ ನಡೆಯುತ್ತಿದ್ದು, ಇದುವರೆಗೆ 1,31,525 ನಮೂನೆಗಳು (ಶೇ. 10.15) ಡಿಜಿಟಲೀಕರಣಗೊಂಡಿವೆ. ಜೊತೆಗೆ 1,923 ನಮೂನೆಗಳು (ಶೇ. 0.15) ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ಪರಿಷ್ಕರಣೆ ಕಾರ್ಯದ ವೇಳೆ ಮೃತಪಟ್ಟ, ಶಾಶ್ವತವಾಗಿ ಸ್ಥಳಾಂತರಗೊಂಡ, ಪುನರಾವರ್ತಿತ ಹಾಗೂ ಇತರೆ ಅನರ್ಹ ಮತದಾರರನ್ನು ಗುರುತಿಸಿ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಈವರೆಗೆ ಒಟ್ಟು 2,189 ವಿಶೇಷ ಪ್ರಕರಣಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 1,118 ಮೃತಪಟ್ಟವರು, 776 ಶಾಶ್ವತವಾಗಿ ಸ್ಥಳಾಂತರಗೊಂಡವರು, 246 ಈಗಾಗಲೇ ಬೇರೆಡೆ ನೋಂದಣಿಯಾಗಿರುವವರು, 30 ಗೈರುಹಾಜರಾದವರು ಹಾಗೂ 19 ಇತರೆ ಪ್ರಕರಣಗಳು ಸೇರಿವೆ.
ಜಿಲ್ಲೆಯ ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳಲ್ಲೂ ವಿತರಣೆ ಮತ್ತು ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಮುಳಬಾಗಿಲು ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟು 2,24,684 ಮತದಾರರ ಪೈಕಿ 2,24,453 ನಮೂನೆಗಳನ್ನು ವಿತರಿಸಲಾಗಿದೆ. ಅಲ್ಲದೆ 35,614 ನಮೂನೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಮುಂಚೂಣಿಯಲ್ಲಿದೆ.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,42,034 ಮತದಾರರಿದ್ದು, 2,17,958 ನಮೂನೆಗಳನ್ನು ವಿತರಿಸಲಾಗಿದ್ದು, 23,902 ನಮೂನೆಗಳು ಡಿಜಿಟಲೀಕರಣಗೊಂಡಿವೆ. ಬಂಗಾರಪೇಟೆ ಕ್ಷೇತ್ರದಲ್ಲಿ 25,400, ಶ್ರೀನಿವಾಸಪುರದಲ್ಲಿ 17,316, ಮಾಲೂರು ಕ್ಷೇತ್ರದಲ್ಲಿ 14,966 ಹಾಗೂ ಕೆಜಿಎಫ್ ಕ್ಷೇತ್ರದಲ್ಲಿ 14,327 ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಹಾಗೂ ಡಿಜಿಟಲೀಕರಣ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಲು ಚುನಾವಣಾ ಶಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್