
ಕೋಲಾರ, ೦೮ ಜುಲೈ (ಹಿ.ಸ):
ಆ್ಯಂಕರ್ : ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಯಾಮ್ಸಂಗ್ ಆರ್ & ಡಿ ಇನ್‌ಸ್ಟಿಟ್ಯೂಟ್ ಬೆಂಗಳೂರು ಇದುವರೆಗೆ ಸುಮಾರು 15 ಲಕ್ಷ ನೋಟ್‌ಪುಸ್ತಕಗಳನ್ನು ವಿತರಿಸುವ ಮೂಲಕ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ ಎಂದು ಸಂಸ್ಥೆಯ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಪೊರೇಟ್ ಉಪಾಧ್ಯಕ್ಷ ಮೋಹನ್ ರಾವ್ ಗೋಲಿ ತಿಳಿಸಿದ್ದಾರೆ.
ಕೆಜಿಎಫ್ ತಾಲ್ಲೂಕಿನ ಬಡಮಾಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ಯಾಮ್ಸಂಗ್ ಸಂಸ್ಥೆಯ ಉದ್ಯೋಗಿಗಳಿಂದ ನೋಟ್‌ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಕೊರಿಯಾದ ಹೊರಗಿರುವ ಸ್ಯಾಮ್ಸಂಗ್‌ನ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ ಒಂದಾದ ಸ್ಯಾಮ್ಸಂಗ್ ಆರ್ & ಡಿ ಇನ್‌ಸ್ಟಿಟ್ಯೂಟ್ ಬೆಂಗಳೂರು ಶಿಕ್ಷಣ ಕ್ಷೇತ್ರದಲ್ಲಿ ತನ್ನ ಏಳನೇ ಆವೃತ್ತಿಯ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಹೇಳಿದರು.
ಈ ವರ್ಷದ ಅಭಿಯಾನದಡಿ ಕರ್ನಾಟಕದ 195 ಸರ್ಕಾರಿ ಶಾಲೆಗಳ 7,620 ವಿದ್ಯಾರ್ಥಿಗಳಿಗೆ 42,819 ನೋಟ್‌ಪುಸ್ತಕಗಳನ್ನು ವಿತರಿಸಲಾಗಿದೆ. 2015ರಲ್ಲಿ ಆರಂಭವಾದ ಈ ಅಭಿಯಾನವು ವರ್ಷದಿಂದ ವರ್ಷಕ್ಕೆ ವಿಸ್ತರಿಸಿಕೊಂಡು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ 100ಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂಸೇವಕರಾಗಿ ಭಾಗವಹಿಸಿ, ಕೋಲಾರ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ವತಃ ನೋಟ್‌ಪುಸ್ತಕಗಳನ್ನು ವಿತರಿಸಿದರು. ಶಿಕ್ಷಣದ ಜೊತೆಗೆ ಸಮಾಜದ ಅಭಿವೃದ್ಧಿಗೆ ಸಂಸ್ಥೆಯ ಬದ್ಧತೆಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ ಎಂದು ಮೋಹನ್ ರಾವ್ ಗೋಲಿ ಹೇಳಿದರು.
2015ರಲ್ಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಿದ್ದರೂ ನೋಟ್‌ಪುಸ್ತಕ ಹಾಗೂ ಇತರ ಮೂಲಭೂತ ಶೈಕ್ಷಣಿಕ ಸಾಮಗ್ರಿಗಳ ಕೊರತೆ ಇರುವುದನ್ನು ಸಂಸ್ಥೆಯ ಉದ್ಯೋಗಿಗಳು ಗಮನಿಸಿದ್ದರು. ಇದೇ ಹಿನ್ನೆಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ನೋಟ್‌ಪುಸ್ತಕ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಎಂದು ಅವರು ವಿವರಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಅಮಿತ್ ಮನ್ನನ್ ಮಾತನಾಡಿ, ನಾವೀನ್ಯತೆ ಮತ್ತು ಶಿಕ್ಷಣ ಒಂದಕ್ಕೊಂದು ಪೂರಕವಾಗಿವೆ. ಮಗುವಿನ ಕೈಯಲ್ಲಿರುವ ನೋಟ್‌ಪುಸ್ತಕ ಕೇವಲ ಬರೆಯುವ ಪುಸ್ತಕವಲ್ಲ; ಅದು ಆತ್ಮವಿಶ್ವಾಸ, ಅವಕಾಶಗಳು ಹಾಗೂ ಕನಸುಗಳಿಗೆ ದಾರಿ ತೆರೆದಿಡುವ ಸಾಧನವಾಗಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯ ಬೆಂಬಲ ನೀಡುವುದು ನಮ್ಮ ಬದ್ಧತೆಯಾಗಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ರವಿಕುಮಾರ್ ಕಾಳಿಮನೆ ಮಾತನಾಡಿ, ಯುವ ಮನಸ್ಸುಗಳನ್ನು ಸಬಲಗೊಳಿಸುವುದೇ ಸಮುದಾಯದ ಸಬಲೀಕರಣದ ಮೊದಲ ಹೆಜ್ಜೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯವಾದ ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಅವರ ಕಲಿಕೆ, ಬೆಳವಣಿಗೆ ಹಾಗೂ ಯಶಸ್ಸಿಗೆ ಪೂರಕ ವಾತಾವರಣ ನಿರ್ಮಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಬಡಮಾಕನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶಮೂರ್ತಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನಿರಂತರವಾಗಿ ನೆರವಾಗುತ್ತಿರುವ ಸ್ಯಾಮ್ಸಂಗ್ ಸಂಸ್ಥೆ ಹಾಗೂ ಅದರ ಉದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸ್ಯಾಮ್ಸಂಗ್‌ನ ಸಾಮಾಜಿಕ ಸೇವೆ ನೋಟ್‌ಪುಸ್ತಕ ವಿತರಣೆಗೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದ ಅನೇಕ ಸರ್ಕಾರಿ ಶಾಲೆಗಳಿಗೆ ಟ್ಯಾಬ್ಲೆಟ್‌ಗಳು, ಮೇಜು-ಬೆಂಚುಗಳು, ಫ್ಲಿಪ್‌ಬೋರ್ಡ್‌ಗಳು, ಶಾಲಾ ಕಿಟ್‌ಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಕೆಜಿಎಫ್ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಪಿ. ಶ್ರೀನಿವಾಸ್, ಸಹಕಾರ್ಯದರ್ಶಿ ಶ್ರೀನಿವಾಸಮೂರ್ತಿ ಸೇರಿದಂತೆ ಶಿಕ್ಷಕರು, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್