
ಕಲಬುರಗಿ, 07 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜನಪರ, ಪರಿಶುದ್ಧ ಹಾಗೂ ಸಮಾನತೆಯ ಆಡಳಿತ ನೀಡುವುದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ಕಟ್ಟಕಡೆಯ ವ್ಯಕ್ತಿಗೂ ನಾಗರಿಕ ಹಕ್ಕುಗಳು ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ತಾವು ಬಸವಣ್ಣನ ಸಮಾನತೆಯ ತತ್ವದಲ್ಲಿ ನಂಬಿಕೆ ಹೊಂದಿದ್ದು, ಉತ್ತರ ಕರ್ನಾಟಕ ಪ್ರವಾಸವನ್ನು ಬಸವಕಲ್ಯಾಣದಿಂದ ಆರಂಭಿಸಿರುವುದಾಗಿ ತಿಳಿಸಿದ ಮುಖ್ಯಮಂತ್ರಿ, ಜನರು ಸರ್ಕಾರದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಿಂದ ಮುಖ್ಯಮಂತ್ರಿ ಹುದ್ದೆಯವರೆಗೆ ಆಡಳಿತದ ಎಲ್ಲ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ನೆಪವನ್ನು ಕೇಳುವುದಿಲ್ಲ. ನನಗೆ ಫಲಿತಾಂಶವೇ ಮುಖ್ಯ. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಪ್ರೋತ್ಸಾಹವಿದ್ದರೆ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ಒಬ್ಬ ಅರ್ಹ ಮತದಾರನೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಸೂಚಿಸಿದರು. ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಅರ್ಹ ಮತದಾರರ ಹೆಸರನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ರಾಜ್ಯದ ನೀರಿನ ನಿರ್ವಹಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಅಂತರರಾಜ್ಯ ಜಲ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗಿದ್ದು, ಕೃಷ್ಣ, ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆ ಯೋಜನೆಗೆ ಕೇಂದ್ರ ಸರ್ಕಾರವೂ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಗೊಂಡ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಯಥಾವತ್ತಾಗಿ ಮುಂದುವರಿಯಲಿದ್ದು, ಆಡಳಿತದಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ಹಾಗೂ ಜನಕೇಂದ್ರಿತ ದೃಷ್ಟಿಕೋನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.