
ಗದಗ, 07 ಜುಲೈ (ಹಿ.ಸ.)
ಆ್ಯಂಕರ್:- 2026–27ನೇ ಶೈಕ್ಷಣಿಕ ಸಾಲಿಗೆ ಗದಗ ಜಿಲ್ಲೆಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಜುಲೈ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಕಟಣೆಯ ಪ್ರಕಾರ, ಸಾಮಾನ್ಯ ಪದವಿ ಮಟ್ಟದ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಭರ್ತಿ ಮಾಡಿ, ಅದರ ಮುದ್ರಿತ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಂಬಂಧಿತ ವಸತಿ ನಿಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ನಿಗದಿತ ದಿನಾಂಕದ ನಂತರ ಸಲ್ಲಿಕೆಯಾಗುವ ಯಾವುದೇ ಅರ್ಜಿಗಳು ಅಥವಾ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೆ, ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.
ಗದಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಈ ಪ್ರವೇಶಾತಿ ನಡೆಯಲಿದೆ. ಗದಗ ನಗರದ ಎಸ್.ಎಂ. ಕೃಷ್ಣಾ ನಗರದಲ್ಲಿರುವ ಬಾಲಕರ ವಸತಿ ನಿಲಯಗಳು, ಕಳಸಾಪೂರ ರಸ್ತೆಯ ಬಾಲಕಿಯರ ವಸತಿ ನಿಲಯಗಳು, ರೋಣದ ಬದಾಮಿ ರಸ್ತೆಯ ಬಾಲಕರ ವಸತಿ ನಿಲಯ, ಮುಂಡರಗಿಯ ಕೊಪ್ಪಳ ರಸ್ತೆಯ ಪಿಯು ಕಾಲೇಜು ಎದುರಿನ ಬಾಲಕಿಯರ ವಸತಿ ನಿಲಯ, ಗಜೇಂದ್ರಗಡದ ಕುಷ್ಟಗಿ ರಸ್ತೆಯ ಬಾಲಕರ ವಸತಿ ನಿಲಯ, ನರಗುಂದದ ಹೊಸಮನಿ ಬಿಲ್ಡಿಂಗ್ನಲ್ಲಿರುವ ಬಾಲಕರ ವಸತಿ ನಿಲಯ ಹಾಗೂ ಲಕ್ಷ್ಮೇಶ್ವರದ ದೇಸಾಯಿ ಬಣ, ಬಾಳಿಗೇರಿ ಓಣಿಯಲ್ಲಿರುವ ಬಾಲಕರ ವಸತಿ ನಿಲಯಗಳಲ್ಲಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ವಸತಿ, ಅಧ್ಯಯನಕ್ಕೆ ಅನುಕೂಲಕರ ವಾತಾವರಣ ಹಾಗೂ ಸರ್ಕಾರದ ನಿಯಮಾನುಸಾರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ಯೋಜನೆ ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳು ಅಥವಾ ಹತ್ತಿರದ ಅಲ್ಪಸಂಖ್ಯಾತರ ವಸತಿ ನಿಲಯಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP