
ಬಾಗಲಕೋಟೆ, 06 ಜುಲೈ (ಹಿ.ಸ.)
ಆ್ಯಂಕರ್ : ಪ್ರಸವ ವೇದನೆಯಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದ ಬೀದಿ ಹಸುವಿನ ಜೀವವನ್ನು ಪಶುವೈದ್ಯರು ಹಾಗೂ ಸ್ಥಳೀಯ ನಾಗರಿಕರ ಸಮಯೋಚಿತ ಸಹಕಾರದಿಂದ ಯಶಸ್ವಿಯಾಗಿ ಉಳಿಸಿದ ಘಟನೆ ಬಾಗಲಕೋಟೆ ನಗರದ ನವನಗರ ಸೆಕ್ಟರ್ ನಂ.10ರಲ್ಲಿ ನಡೆದಿದೆ.
ನವನಗರದ ರಸ್ತೆಯೊಂದರಲ್ಲಿ ಹಲವು ಗಂಟೆಗಳ ಕಾಲ ಪ್ರಸವ ವೇದನೆಯಿಂದ ನರಳುತ್ತಿದ್ದ ಹಸುವನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಪಶುಸಂಗೋಪನೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆಯೇ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ಡಾ. ಕರಡಿಗುಡ್ಡ ಹಾಗೂ ಡಾ. ಶಂಕರಗೌಡ ಅವರ ಮಾರ್ಗದರ್ಶನದಲ್ಲಿ ಪಶುವೈದ್ಯರ ತಂಡ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ಆರಂಭಿಸಿತು.
ಡಾ. ಎಫ್.ಡಿ. ಮೆಣಸಿನಕಾಯಿ, ಡಾ. ಎಸ್.ವಿ. ಬಾದಾಮಿ, ಡಾ. ಶ್ರವಣಕುಮಾರ ಗದ್ದಿ, ಡಾ. ಬಿ.ಕೆ. ಮಠ, ಡಾ. ಮ್ಯಾಗೇರಿ ಸೇರಿದಂತೆ ಪಶು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಹಲವು ಗಂಟೆಗಳ ಕಾಲ ನಿರಂತರ ಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ಕ್ರಮಗಳನ್ನು ಕೈಗೊಂಡರು. ಸಂಕೀರ್ಣ ಪರಿಸ್ಥಿತಿಯಲ್ಲಿದ್ದ ಹಸುವಿನ ಪ್ರಸವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಅದರ ಜೀವವನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾದರು.
ಆದರೆ, ದುರ್ಭಾಗ್ಯವಶಾತ್ ಗರ್ಭದಲ್ಲಿದ್ದ ಕರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೂ ತಾಯಿಹಸುವಿನ ಜೀವವನ್ನು ಉಳಿಸಲು ವೈದ್ಯರು ತೋರಿದ ತ್ವರಿತ ಕಾರ್ಯಾಚರಣೆ ಮತ್ತು ಪರಿಣತಿ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಚಿಕಿತ್ಸೆ ವೇಳೆ ನವನಗರ ಸೆಕ್ಟರ್ ನಂ.10ರ ಮಾರುತೇಶ್ವರ ಸಮಿತಿ ಹಾಗೂ ಯುವಕ ಮಂಡಳಿಯ ಸದಸ್ಯರು ವೈದ್ಯರಿಗೆ ಅಗತ್ಯ ನೆರವು ಒದಗಿಸಿ ಮಾನವೀಯತೆ ಮೆರೆದರು. ಸ್ಥಳೀಯ ನಿವಾಸಿಗಳ ಸಹಕಾರದಿಂದ ಚಿಕಿತ್ಸಾ ಕಾರ್ಯ ಸುಗಮವಾಗಿ ನಡೆದಿದ್ದು, ಪಶುವೈದ್ಯರ ಸೇವಾ ಮನೋಭಾವ ಹಾಗೂ ಸಾರ್ವಜನಿಕರ ಸಮಯೋಚಿತ ಸ್ಪಂದನೆ ಸಮಾಜಕ್ಕೆ ಮಾದರಿಯಾಗಿದೆ.
ಈ ಘಟನೆ ಮನುಷ್ಯರಷ್ಟೇ ಅಲ್ಲದೆ ಮೂಕ ಪ್ರಾಣಿಗಳ ಜೀವಕ್ಕೂ ಸಮಾನ ಮೌಲ್ಯ ನೀಡುವ ಮಾನವೀಯ ಮನೋಭಾವವನ್ನು ಪ್ರತಿಬಿಂಬಿಸಿದ್ದು, ಪಶುಸಂಗೋಪನೆ ಇಲಾಖೆಯ ಕಾರ್ಯವೈಖರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande