
ಹಂಪಿ, 06 ಜುಲೈ (ಹಿ.ಸ.):
ಆ್ಯಂಕರ್ : ಕರ್ನಾಟಕವನ್ನು ಜಾಗತಿಕ ಮಟ್ಟದ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ, 'ಜಾಗತಿಕ ಗುಣಮಟ್ಟದ ಪ್ರವಾಸಿ ತಾಣಗಳ ಅಭಿವೃದ್ಧಿ' ಕುರಿತ ರಾಜ್ಯಮಟ್ಟದ ಸಮಾಲೋಚನಾ ಕಾರ್ಯಾಗಾರವನ್ನು ನಾಳೆ ಹಂಪಿಯಲ್ಲಿ ಆಯೋಜಿಸಲಾಗಿದೆ.
ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ, ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಜಂಟಿ ಕಾರ್ಯದರ್ಶಿಗಳಾದ ಸುವಾಶಿಷ್ ದಾಸ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ತ್ರಿಲೋಕ್ ಚಂದ್ರ, ಆಯುಕ್ತರಾದ ಡಾ ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಜಂಗಲ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಪ್ರವಾಸೋದ್ಯಮ ಕ್ಷೇತ್ರದ ಹೂಡಿಕೆದಾರರು, ಆತಿಥ್ಯ ಉದ್ಯಮದ ಪ್ರತಿನಿಧಿಗಳು, ಪ್ರವಾಸೋದ್ಯಮ ತಜ್ಞರು ಹಾಗೂ ವಿವಿಧ ವಲಯಗಳ ಪ್ರಮುಖ ಹಿತಾಸಕ್ತಿದಾರರು ಭಾಗವಹಿಸಲಿದ್ದಾರೆ.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಭವಿಷ್ಯದ ಬೆಳವಣಿಗೆಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಾರ್ಯಾಗಾರದಲ್ಲಿ, ಜಾಗತಿಕ ಗುಣಮಟ್ಟದ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಬೇಕಾದ ಪ್ರಮುಖ ತಾಣಗಳ ಕುರಿತು 360 ಡಿಗ್ರಿ ಸಮಗ್ರ ಚರ್ಚೆ ನಡೆಯಲಿದೆ.
ಪ್ರವಾಸಿ ತಾಣಗಳ ಆಯ್ಕೆಗೆ ಅಗತ್ಯ ಮಾನದಂಡಗಳು, ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರ ಅನುಭವ ಸುಧಾರಣೆ, ಖಾಸಗಿ ಹೂಡಿಕೆ ಅವಕಾಶಗಳು, ಪರಿಸರ ಸಂರಕ್ಷಣೆ, ಸ್ಥಳೀಯ ಸಮುದಾಯದ ಭಾಗವಹಿಸುವಿಕೆ, ಸಂಪರ್ಕ ವ್ಯವಸ್ಥೆ, ಬ್ರ್ಯಾಂಡಿಂಗ್, ಅಂತರರಾಷ್ಟ್ರೀಯ ಮಾರುಕಟ್ಟೆ ಹಾಗೂ ಸುಸ್ಥಿರ ಪ್ರವಾಸೋದ್ಯಮ ಮಾದರಿಗಳ ಕುರಿತು ವಿವಿಧ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಈ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗೂ ಶಿಫಾರಸುಗಳ ಆಧಾರದ ಮೇಲೆ, ರಾಜ್ಯದ ಮೊದಲ ಹಂತದಲ್ಲಿ ಜಾಗತಿಕ ಗುಣಮಟ್ಟದ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವ ಆದ್ಯತೆಯ ಪ್ರವಾಸಿ ತಾಣಗಳನ್ನು ಅಂತಿಮಗೊಳಿಸುವ ನಿರ್ಧಾರ ಕೈಗೊಳ್ಳಲಾಗುವ ಸಾಧ್ಯತೆ ಇದೆ.
ಈ ಯೋಜನೆಯ ಮೂಲಕ ಆಯ್ಕೆಯಾಗುವ ಪ್ರವಾಸಿ ತಾಣಗಳನ್ನು ವಿಶ್ವದರ್ಜೆಯ ಮೂಲಸೌಕರ್ಯ, ಪ್ರವಾಸಿಗರಿಗೆ ಉತ್ತಮ ಅನುಭವ, ಖಾಸಗಿ ಹೂಡಿಕೆ, ಸುಸ್ಥಿರ ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡಿಂಗ್ ಮೂಲಕ ಅಭಿವೃದ್ಧಿಪಡಿಸಿ, ಕರ್ನಾಟಕವನ್ನು ಭಾರತದ ಪ್ರಮುಖ ಜಾಗತಿಕ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್