ವಿಜಯಪುರ:ಹಿರಿಯ ಕಾಂಗ್ರೆಸ್ ಮುಖಂಡ ಕೃಷ್ಣಾಜಿ ಕುಲಕರ್ಣಿ ನಿಧನ
ವಿಜಯಪುರ, 06 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮಮದಾಪುರ ಹೋಬಳಿಯ ಹಿರಿಯ ಕಾಂಗ್ರೆಸ್ ಮುಖಂಡರು, ಪ್ರಗತಿಪರ ರೈತರು, ಶಿಕ್ಷಣ ಪ್ರೇಮಿಗಳು ಹಾಗೂ ಜನಾನುರಾಗಿಯಾಗಿದ್ದ ಕೃಷ್ಣಾಜಿ ಕುಲಕರ್ಣಿ ಅವರ ಅಕಾಲಿಕ ನಿಧನದ ಸುದ್ದಿ ಕ್ಷೇತ್ರದ ಜನತೆ, ಕಾಂಗ್ರೆಸ್ ಕಾರ್ಯಕರ
ಸಂತಾಪ


ವಿಜಯಪುರ, 06 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮಮದಾಪುರ ಹೋಬಳಿಯ ಹಿರಿಯ ಕಾಂಗ್ರೆಸ್ ಮುಖಂಡರು, ಪ್ರಗತಿಪರ ರೈತರು, ಶಿಕ್ಷಣ ಪ್ರೇಮಿಗಳು ಹಾಗೂ ಜನಾನುರಾಗಿಯಾಗಿದ್ದ ಕೃಷ್ಣಾಜಿ ಕುಲಕರ್ಣಿ ಅವರ ಅಕಾಲಿಕ ನಿಧನದ ಸುದ್ದಿ ಕ್ಷೇತ್ರದ ಜನತೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ವಲಯಗಳಲ್ಲಿ ತೀವ್ರ ಶೋಕದ ವಾತಾವರಣವನ್ನು ಸೃಷ್ಟಿಸಿದೆ ಎಂದು ಸಚಿವ ಎಂ ಬಿ ಪಾಟೀಲ್ ಪ್ರಕಟಣೆ ಮೂಲಕ ಸಂತಾಪ ಸೂಚಿಸಿದ್ದಾರೆ.

ರಾಜಕೀಯ ಜೀವನವನ್ನು ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರಾಗಿ ಆರಂಭಿಸಿದ್ದ ಕೃಷ್ಣಾಜಿ ಕುಲಕರ್ಣಿ ಅವರು ಪಕ್ಷ ಸಂಘಟನೆಗೆ ಅಪಾರ ಶ್ರಮವಹಿಸಿದ್ದರು. ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತಾಲ್ಲೂಕು ಪಂಚಾಯತ್ ಸದಸ್ಯರಾಗಿಯೂ ಜನಪರ ಆಡಳಿತ ಮತ್ತು ಗ್ರಾಮೀಣ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.

ಶಿಕ್ಷಣ ಕ್ಷೇತ್ರದ ಮೇಲಿನ ವಿಶೇಷ ಕಾಳಜಿಯಿಂದ ಮಮದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಕಾಲೇಜಿನ ಅಭಿವೃದ್ಧಿ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸಲು ಶ್ರಮಿಸಿದ್ದರು. ಅಲ್ಲದೆ ವಿಜಯಪುರದ ಪ್ರತಿಷ್ಠಿತ ಬಿಡಿಇ ಸಂಸ್ಥೆಯ ಅಧ್ಯಕ್ಷರಾಗಿ ಪಿಡಿಜೆ ಶಾಲೆ ಹಾಗೂ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದರು.

ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಕೃಷ್ಣಾಜಿ ಕುಲಕರ್ಣಿ ಅವರು ಸಕ್ರಿಯರಾಗಿದ್ದರು. ಹಲಗಣಿಯ ಶ್ರೀ ಹನುಮಂತ ದೇವರ ದೇವಸ್ಥಾನದ ವ್ಯವಸ್ಥಾಪಕ ಮಂಡಳಿಯ ಸದಸ್ಯರಾಗಿ ದೇವಸ್ಥಾನದ ಅಭಿವೃದ್ಧಿ, ಭಕ್ತರಿಗೆ ಅಗತ್ಯ ಸೌಲಭ್ಯಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಗೆ ಶ್ರಮಿಸಿ ಜನಮೆಚ್ಚುಗೆ ಪಡೆದಿದ್ದರು.

ಪ್ರಗತಿಪರ ರೈತರಾಗಿದ್ದ ಅವರು ಕೃಷಿ ಕ್ಷೇತ್ರದಲ್ಲಿಯೂ ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದರು. ಸರಳ ವ್ಯಕ್ತಿತ್ವ, ಜನಸ್ನೇಹಿ ನಡೆ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಅವರು ಅಪಾರ ಜನಾಭಿಮಾನವನ್ನು ಗಳಿಸಿದ್ದರು.

ಕೃಷ್ಣಾಜಿ ಕುಲಕರ್ಣಿ ಅವರ ಅಗಲಿಕೆಯಿಂದ ಸಮಾಜವು ನಿಷ್ಠಾವಂತ ಜನಸೇವಕ, ಶಿಕ್ಷಣ ಪ್ರೇಮಿ ಹಾಗೂ ಸಮಾಜಮುಖಿ ನಾಯಕನನ್ನು ಕಳೆದುಕೊಂಡಿದೆ ಎಂದು ವಿವಿಧ ಗಣ್ಯರು, ರಾಜಕೀಯ ಮುಖಂಡರು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande