
ಬೆಂಗಳೂರು, 06 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಎನ್‌ಡಿಎ ನಿಯೋಗವು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿ, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿತು.
ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ವಿಶ್ವಾಸಾರ್ಹ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಈ ಪ್ರಕ್ರಿಯೆಯಿಂದ ದೋಷಪೂರಿತ ಹಾಗೂ ವಿಶ್ವಾಸಾರ್ಹವಲ್ಲದ ಮತದಾರರ ಪಟ್ಟಿ ಸೃಷ್ಟಿಯಾಗುವ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಬೇಕಾದರೂ, ಹಲವೆಡೆ ಸಮುದಾಯ ಭವನಗಳು, ಮಸೀದಿಗಳು ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳ ನಿವಾಸಗಳಲ್ಲಿ ಗಣತಿ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇಂತಹ ಕ್ರಮಗಳು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಿವೆ ಎಂದು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿ ವಾಟ್ಸ್ಆಪ್ ಗುಂಪುಗಳನ್ನು ರಚಿಸಿ ಮತದಾರರನ್ನು ನಿರ್ದಿಷ್ಟ ಸ್ಥಳಗಳಿಗೆ ಕರೆಸಿ ಅರ್ಜಿ ಭರ್ತಿ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಜೋಶಿ ಮಾಡಿದರು. ಇದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿಯನ್ನು ಒಳಗೊಂಡ ಪೆನ್‌ಡ್ರೈವ್ ಅನ್ನು ಚುನಾವಣಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಈಗಾಗಲೇ ಭರ್ತಿ ಮಾಡಿರುವ ಎಲ್ಲಾ ಗಣತಿ ನಮೂನೆಗಳನ್ನು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಎನ್‌ಡಿಎ ಆಗ್ರಹಿಸಿದೆ. ಜೊತೆಗೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ ಅಧಿಕಾರಿಗಳು ಹಾಗೂ ರಾಜಕೀಯ ಪದಾಧಿಕಾರಿಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಈ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದ ಜೋಶಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಹೊಸದಾಗಿ ಎನ್ಯುಮರೇಷನ್ ಪ್ರಕ್ರಿಯೆ ನಡೆಸುವಂತೆ ಮುಖ್ಯ ಚುನಾವಣಾಧಿಕಾರಿಯನ್ನು ಒತ್ತಾಯಿಸಲಾಗಿದೆ ಎಂದರು.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರಸ್ವಾಮಿ ಕೂಡ ಇದೇ ವಿಷಯವಾಗಿ ದೂರು ಸಲ್ಲಿಸಿದ್ದರೂ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಜೋಶಿ ಹೇಳಿದರು.
ಬಿಎಲ್ಒಗಳ ಗುರುತಿನ ಚೀಟಿಗಳಲ್ಲಿ ಸ್ಥಳೀಯ ಶಾಸಕರ ಫೋಟೋಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ ಅವರು, ಇದು ಚುನಾವಣಾ ವ್ಯವಸ್ಥೆಯ ತಟಸ್ಥತೆಗೆ ಧಕ್ಕೆ ತರುವ ಬೆಳವಣಿಗೆ ಎಂದು ಟೀಕಿಸಿದರು.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ಮಾಡಿಕೊಡುತ್ತಿದೆ ಎಂದು ಆರೋಪಿಸಿದ ಜೋಶಿ, ಮನೆ-ಮನೆಗೆ ಪರಿಶೀಲನೆ ನಡೆಸದಿದ್ದರೆ ಮತದಾರರ ನೈಜ ಗುರುತು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯನ್ನು ಆಯ್ದ ಬೂತ್‌ಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದು, ಇದರಿಂದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಪ್ರಶ್ನಾರ್ಥಕವಾಗುತ್ತಿದೆ ಎಂದು ಎನ್‌ಡಿಎ ನಾಯಕರು ಆರೋಪಿಸಿ, ಚುನಾವಣಾ ಆಯೋಗ ತಕ್ಷಣ ಮಧ್ಯಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.