
ಗದಗ, 06 ಜುಲೈ (ಹಿ.ಸ.)
ಆ್ಯಂಕರ್:
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರಗಳನ್ನು ಬೆಳೆಸುವುದು ಮುಂದಿನ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ. ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದರ ಪೋಷಣೆಯ ಹೊಣೆ ಹೊತ್ತರೆ ಹಸಿರು ಪರಿಸರ ನಿರ್ಮಾಣದ ಜೊತೆಗೆ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವವನ್ನು ಅರ್ಥಪೂರ್ಣವಾಗಿ ವ್ಯಕ್ತಪಡಿಸಿದಂತಾಗುತ್ತದೆ ಎಂಬ ಸಂದೇಶದೊಂದಿಗೆ ಭಾರತೀಯ ಜನತಾ ಪಕ್ಷದ ಗದಗ ನಗರ ಮಂಡಲ ವತಿಯಿಂದ ಏಕ್ ಪೇಡ್ ಮಾ ಕೇ ನಾಮ್ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮವನ್ನು ಗದಗ ನಗರದ ವಾರ್ಡ್ ಸಂಖ್ಯೆ 11ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಯಿತು.
ಅರಣ್ಯ ಇಲಾಖೆಯ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 30 ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಪರಿಸರ ಸಂರಕ್ಷಣೆ, ಹಸಿರು ಅಭಿವೃದ್ಧಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮದ ನೇತೃತ್ವವನ್ನು ವಾರ್ಡ್ ಸಂಖ್ಯೆ 11ರ ನಗರಸಭಾ ಸದಸ್ಯೆ ಶ್ವೇತಾ ದಂಡಿನ ಹಾಗೂ ಬೂತ್ ಅಧ್ಯಕ್ಷ ಅವಿನಾಶ ಹೊನಗುಡಿ ವಹಿಸಿದ್ದರು. ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖಂಡರು, ಮರಗಳ ಸಂಖ್ಯೆ ಹೆಚ್ಚಿದಷ್ಟೂ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ತಾಪಮಾನ, ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯದ ಪರಿಣಾಮವಾಗಿ ಹವಾಮಾನ ವೈಪರೀತ್ಯಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕರೂ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆಯಿಂದ ದೇಶಾದ್ಯಂತ 'ಏಕ್ ಪೇಡ್ ಮಾ ಕೇ ನಾಮ್' ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಅದನ್ನು ಮರವಾಗಿ ಬೆಳೆಸುವುದು ತಾಯಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಅನೀಲ ಅಬ್ಬಿಗೇರಿ ಮಾತನಾಡಿ, ಪರಿಸರವನ್ನು ಉಳಿಸುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಕರ್ತವ್ಯವೂ ಆಗಿದೆ. ಗಿಡ ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನೂ ಎಲ್ಲರೂ ವಹಿಸಬೇಕು. ಆರೋಗ್ಯಕರ ಜೀವನಕ್ಕಾಗಿ ಶುದ್ಧ ಗಾಳಿ, ಹಸಿರು ಪರಿಸರ ಮತ್ತು ಉತ್ತಮ ಪರಿಸರ ವ್ಯವಸ್ಥೆ ಅಗತ್ಯವಾಗಿದೆ ಎಂದು ಹೇಳಿದರು.
ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಶಂಕರ ಕಾಕಿ, ಶಶಿಧರ ದಿಂಡೂರ, ಮೋಹನ ಹೊನಗುಡಿ, ರಾಜು ಮುಧೋಳ, ವಿ.ಕೆ. ಗುರುಮಠ, ಸುದರ್ಶನ ಹಾನಗಲ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು, ವಾರ್ಡ್ನ ಪ್ರಮುಖರು, ಮಹಿಳಾ ಕಾರ್ಯಕರ್ತೆಯರು, ಯುವ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ತಾಯಿಯ ಹೆಸರಿನಲ್ಲಿ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಹಸಿರು ಪರಿಸರ ನಿರ್ಮಾಣದ ಮೂಲಕ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆಯಂತಹ ಜನಪರ ಅಭಿಯಾನಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP