
ಬಾಗಲಕೋಟೆ, 06 ಜುಲೈ (ಹಿ.ಸ.)
ಆ್ಯಂಕರ್ : ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಉತ್ತಮ ಮಳೆಯ ಪರಿಣಾಮವಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜೀವನಾಡಿಯಾಗಿರುವ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಹಲವು ದಿನಗಳಿಂದ ಬರಿದಾಗಿದ್ದ ನದಿ ಈಗ ಮೈದುಂಬಿ ಹರಿಯಲು ಆರಂಭಿಸಿದೆ. ಇದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ತೀರದ ಗ್ರಾಮಗಳ ನಿವಾಸಿಗಳಲ್ಲಿ ಸಂತಸ ಮನೆ ಮಾಡಿದೆ.
ನಗರದ ಹೊರವಲಯದಲ್ಲಿರುವ ಸಿದ್ದರಾಮೇಶ್ವರ ಬ್ಯಾರೇಜ್ ಸಂಪೂರ್ಣ ತುಂಬಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಳೆದ ಜೂನ್ ತಿಂಗಳ ಕೊನೆಯ ವಾರದವರೆಗೂ ನದಿಯಲ್ಲಿ ನೀರಿನ ಮಟ್ಟ ತೀರಾ ಕಡಿಮೆಯಾಗಿದ್ದರಿಂದ ಬರದ ವಾತಾವರಣ ನಿರ್ಮಾಣವಾಗಿತ್ತು.
ಜಾನುವಾರುಗಳಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ಮಟ್ಟ ಕುಸಿತದ ಬಗ್ಗೆ ಆತಂಕ ವ್ಯಕ್ತವಾಗಿತ್ತು.
ಆದರೆ ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಪರಿಣಾಮವಾಗಿ ಸಿದ್ದರಾಮೇಶ್ವರ ಬ್ಯಾರೇಜ್ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಮತ್ತೆ ಜೀವಕಳೆ ಮೂಡಿದೆ.
ನದಿ ತುಂಬಿ ಹರಿಯುತ್ತಿರುವ ದೃಶ್ಯವನ್ನು ವೀಕ್ಷಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರೇಜ್ ಬಳಿ ಆಗಮಿಸುತ್ತಿದ್ದಾರೆ. ನೀರಿನ ಹರಿವಿನಿಂದ ನದಿ ತೀರದ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದು, ರೈತರಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಹೊಸ ನಿರೀಕ್ಷೆ ಮೂಡಿದೆ. ಮುಂಗಾರು ಮಳೆ ಇದೇ ರೀತಿ ಮುಂದುವರಿದರೆ ನೀರಾವರಿ, ಕುಡಿಯುವ ನೀರು ಹಾಗೂ ಅಂತರ್ಜಲ ಮಟ್ಟದಲ್ಲಿ ಮತ್ತಷ್ಟು ಸುಧಾರಣೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.
ತಜ್ಞರ ಪ್ರಕಾರ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಮುಂದುವರಿದರೆ ಘಟಪ್ರಭಾ ನದಿಯ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ನದಿ ತೀರ ಹಾಗೂ ಬ್ಯಾರೇಜ್ ಪ್ರದೇಶಗಳಿಗೆ ಭೇಟಿ ನೀಡುವ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಡಳಿತದಿಂದ ಸೂಚನೆ ನೀಡಲಾಗಿದೆ.
ಘಟಪ್ರಭಾ ನದಿಯಲ್ಲಿ ಮತ್ತೆ ನೀರು ಹರಿಯಲು ಆರಂಭಿಸಿರುವುದು ತಾಲೂಕಿನ ಪರಿಸರ, ಕೃಷಿ ಹಾಗೂ ಜಲ ಸಂಪನ್ಮೂಲದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯೊಂದಿಗೆ ನದಿ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande