ದ್ವೇಷಮುಕ್ತ ಗದಗ ನಿರ್ಮಾಣಕ್ಕೆ ಹಿರಿಯರು ಮಧ್ಯಸ್ಥಿಕೆ ವಹಿಸಲಿ: ಕೃಷ್ಣಾ ಹಡಪದ
ಗದಗ, 06 ಜುಲೈ (ಹಿ.ಸ.) ಆ್ಯಂಕರ್:- ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಸರ್ವಧರ್ಮ ಸಮಭಾವದ ನೆಲೆಯಾಗಿ ಗುರುತಿಸಿಕೊಂಡಿರುವ ಗದಗ ಜಿಲ್ಲೆಯಲ್ಲಿ ಧಾರ್ಮಿಕ ಸೌಹಾರ್ದ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಹಿರಿಯರು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೃಷ್
ಫೋಟೋ


ಗದಗ, 06 ಜುಲೈ (ಹಿ.ಸ.)

ಆ್ಯಂಕರ್:- ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಸರ್ವಧರ್ಮ ಸಮಭಾವದ ನೆಲೆಯಾಗಿ ಗುರುತಿಸಿಕೊಂಡಿರುವ ಗದಗ ಜಿಲ್ಲೆಯಲ್ಲಿ ಧಾರ್ಮಿಕ ಸೌಹಾರ್ದ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಹಿರಿಯರು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಆಗ್ರಹಿಸಿದ್ದಾರೆ.

ಗಂಗಾಪುರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ಜಗದ್ಗುರು ವೀರೇಶ್ವರ ಪುಣ್ಯಾಶ್ರಮದ ನೂತನ ರಥದ ಗಾಲಿಗಳ ಮೇಲಿನ ಹೆಸರಿನ ವಿಚಾರವಾಗಿ ಕಳೆದ ಎರಡು ವಾರಗಳಿಂದ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ದಾನಿ ಫಿರಸಾಬ್ ಕೌತಾಳ ಅವರು ತಮ್ಮ ಹೆಸರನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ನಡೆ ಇಡೀ ರಾಜ್ಯಕ್ಕೇ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೃಷ್ಣಾ ಹಡಪದ, ಸಮಾಜದಲ್ಲಿ ವ್ಯಕ್ತಿಗಿಂತ ಶಾಂತಿ ಮುಖ್ಯ, ಹೆಸರಿಗಿಂತ ಭಕ್ತಿ ದೊಡ್ಡದು ಎಂಬ ಸಂದೇಶವನ್ನು ಫಿರಸಾಬ್ ಕೌತಾಳ ಅವರು ತಮ್ಮ ನಡೆ ಮೂಲಕ ಸಾರಿದ್ದಾರೆ. ಅವರ ಈ ನಿರ್ಧಾರದಿಂದ ಸಾರ್ವಜನಿಕರಲ್ಲಿ ಮೂಡಿದ್ದ ಆತಂಕ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿದೆ. ಆದರೆ ಈ ವಿಷಯಕ್ಕೆ ಸಂಪೂರ್ಣ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಈಗ ಜಿಲ್ಲೆಯ ಹಿರಿಯ ನಾಯಕರು ಮತ್ತು ಆಡಳಿತದ ಮೇಲಿದೆ ಎಂದು ತಿಳಿಸಿದ್ದಾರೆ.

ಗದಗ ಜಿಲ್ಲೆಯ ಇತಿಹಾಸವೇ ಸೌಹಾರ್ದತೆಯ ಪ್ರತೀಕವಾಗಿದೆ. ಇಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮಗಳ ಜನರು ಪರಸ್ಪರ ಗೌರವ ಮತ್ತು ವಿಶ್ವಾಸದಿಂದ ಬದುಕಿಕೊಂಡು ಬಂದಿದ್ದಾರೆ. ಜಿಲ್ಲೆಯ ಧಾರ್ಮಿಕ ಪರಂಪರೆ, ಜಾತ್ರೆಗಳು, ಉತ್ಸವಗಳು ಹಾಗೂ ಮೊಹರಂ ಆಚರಣೆಗಳಲ್ಲಿ ಎಲ್ಲ ಸಮುದಾಯದ ಜನರು ಒಂದಾಗಿ ಪಾಲ್ಗೊಳ್ಳುವ ವಿಶಿಷ್ಟ ಸಂಪ್ರದಾಯವಿದೆ. ಇಂತಹ ಪವಿತ್ರ ನೆಲದಲ್ಲಿ ಸಣ್ಣಪುಟ್ಟ ವಿಚಾರಗಳು ಸಮಾಜದಲ್ಲಿ ಕಹಿ ವಾತಾವರಣಕ್ಕೆ ಕಾರಣವಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು ಸಾರಿದ ಹಿಂದೂ-ಮುಸ್ಲಿಂ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶ, ಜಗದ್ಗುರು ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸೌಹಾರ್ದದ ಚಿಂತನೆ ಹಾಗೂ ಗಾನಯೋಗಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಮಾನವೀಯ ಮೌಲ್ಯಗಳು ಗದಗ ಜಿಲ್ಲೆಯ ಜನಜೀವನದ ಅವಿಭಾಜ್ಯ ಅಂಗವಾಗಿವೆ. ಇಂತಹ ಮಹನೀಯರ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹಡಪದ ತಿಳಿಸಿದ್ದಾರೆ.

ದಾನಿ ಫಿರಸಾಬ್ ಕೌತಾಳ ಅವರು ಸಮಾಜದ ಶಾಂತಿ ಮತ್ತು ಸೌಹಾರ್ದಕ್ಕಾಗಿ ವೈಯಕ್ತಿಕ ಹೆಸರಿಗಿಂತ ಸಾಮಾಜಿಕ ಹಿತವನ್ನೇ ದೊಡ್ಡದಾಗಿ ಪರಿಗಣಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಸಂದರ್ಭದಲ್ಲಿ ವಿವಾದ ಮತ್ತಷ್ಟು ತಾರಕಕ್ಕೇರದಂತೆ ತಡೆಯಲು ಜಿಲ್ಲೆಯ ಹಿರಿಯ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಿಶೇಷವಾಗಿ ಗದಗ ಶಾಸಕ ಎಚ್.ಕೆ. ಪಾಟೀಲ, ಹಿರಿಯ ಮುಖಂಡ ಡಿ.ಆರ್. ಪಾಟೀಲ ಹಾಗೂ ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಜಂಟಿಯಾಗಿ ಮಧ್ಯಸ್ಥಿಕೆ ವಹಿಸಿ ಸೌಹಾರ್ದದ ವಾತಾವರಣ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತವು ಶೀಘ್ರವೇ ಶ್ರೀ ಮಠ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ದಾನಿ ಕುಟುಂಬದ ಸದಸ್ಯರು, ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ವಿವಿಧ ಸಮುದಾಯಗಳ ಗುರು-ಹಿರಿಯರನ್ನು ಒಳಗೊಂಡ ಉನ್ನತ ಮಟ್ಟದ ಸೌಹಾರ್ದ ಸಭೆಯನ್ನು ಕರೆಯಬೇಕು ಎಂದು ಸಲಹೆ ನೀಡಿದ್ದಾರೆ.

ಹಿರಿಯರ ಸಮ್ಮುಖದಲ್ಲಿ ನಡೆಯುವ ಮುಕ್ತ ಚರ್ಚೆಯಿಂದ ಸಮಾಜದಲ್ಲಿ ಉಂಟಾಗಿರುವ ಗೊಂದಲಗಳಿಗೆ ಅಂತ್ಯ ಹಾಡಲು ಸಾಧ್ಯವಾಗುತ್ತದೆ. ಯಾರೊಬ್ಬರ ಭಾವನೆಗೂ ಧಕ್ಕೆಯಾಗದಂತೆ, ಯಾವುದೇ ಸಮುದಾಯದ ಮನಸ್ಸಿಗೆ ನೋವಾಗದಂತೆ ಪರಸ್ಪರ ವಿಶ್ವಾಸ, ಪ್ರೀತಿ ಮತ್ತು ಸಾಮರಸ್ಯದ ಮೂಲಕ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಧಾರ್ಮಿಕ ಆಚರಣೆಗಳು ಮತ್ತು ಜಾತ್ರೆಗಳು ಭಕ್ತರಲ್ಲಿ ಭಯ ಅಥವಾ ಆತಂಕ ಮೂಡಿಸುವುದಕ್ಕಿಂತ ನೆಮ್ಮದಿ, ಭಕ್ತಿ ಮತ್ತು ಏಕತೆಯ ಭಾವನೆ ಬೆಳೆಸಬೇಕು. ಗಂಗಾಪುರ ಪೇಟೆಯ ದುರ್ಗಾದೇವಿ ಜಾತ್ರೆ ಹಾಗೂ ಜಗದ್ಗುರು ವೀರೇಶ್ವರ ಪುಣ್ಯಾಶ್ರಮದ ಉತ್ಸವಗಳು ಹಿಂದಿನಂತೆ ಶಾಂತಿಯುತವಾಗಿ, ಭಕ್ತಿಭಾವದಿಂದ ಹಾಗೂ ಎಲ್ಲ ಸಮುದಾಯಗಳ ಸಹಭಾಗಿತ್ವದಲ್ಲಿ ನಡೆಯಬೇಕು ಎಂಬುದು ಪ್ರತಿಯೊಬ್ಬ ಗದಗ ಜಿಲ್ಲೆಯ ನಾಗರಿಕನ ಆಶಯವಾಗಿದೆ ಎಂದು ಕೃಷ್ಣಾ ಹಡಪದ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈ ವಿವಾದಕ್ಕೆ ಸೌಹಾರ್ದಯುತ ಅಂತ್ಯ ಕಂಡು ಗದಗ ಜಿಲ್ಲೆ ಮತ್ತೊಮ್ಮೆ ಕರ್ನಾಟಕದ ಮುಂದೆ ಭಾವೈಕ್ಯತೆ, ಸರ್ವಧರ್ಮ ಸಮಭಾವ ಮತ್ತು ಸಾಮಾಜಿಕ ಸಾಮರಸ್ಯದ ಮಾದರಿಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಜಾತಿಗಿಂತ ಮಾನವೀಯತೆಯೇ ದೊಡ್ಡದು

ಯಾರೂ ಕೂಡ ಹುಟ್ಟುವಾಗ ತಾವು ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಆಯ್ಕೆ ಮಾಡಿಕೊಂಡು ಬರುವುದಿಲ್ಲ. ಹುಟ್ಟಿದ ನಂತರ ನಾವೇ ಜಾತಿ-ಮತದ ಗೋಡೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಆದರೆ ಅಂತಿಮವಾಗಿ ನಾವೆಲ್ಲರೂ ಮನುಷ್ಯರು, ಒಂದೇ ತಾಯಿಯ ಮಕ್ಕಳು. ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ದ್ವೇಷ ಬಿತ್ತುವುದಕ್ಕಿಂತ ಪ್ರೀತಿ, ಸಾಮರಸ್ಯ ಮತ್ತು ಮಾನವೀಯತೆಯನ್ನು ಬೆಳೆಸುವುದೇ ನಮ್ಮ ಗುರು-ಹಿರಿಯರಿಗೆ ಸಲ್ಲಿಸುವ ನಿಜವಾದ ಗೌರವ. ಗದಗದ ರಥೋತ್ಸವಗಳ ಪಾವಿತ್ರ್ಯ ಮತ್ತು ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಹಡಪದ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande